ಬೆಂಗಳೂರು: ದಂಡ ಹೆಚ್ಚಳವಾದರೂ ಕ್ಯಾರೆ ಅನ್ನದ ವಾಹನ ಸವಾರರು ನಿರಂತರವಾಗಿ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿ ವಾಹನ ಸವಾರರಿಂದ ದಂಡ ವಸೂಲಿ ಮಾಡುವುದನ್ನು ಚುರುಕುಗೊಳಿಸಿದ್ದಾರೆ.
ಇದಕ್ಕೆ ಪೂರಕವಾಗಿ ಡಿ. 13ರಿಂದ 19ರವರೆಗೆ ಅಂದರೆ ಕಳೆದ ಏಳು ದಿನಗಳ ಅಂತರದಲ್ಲಿ 78,574 ಪ್ರಕರಣ ದಾಖಲಿಸಿ 4,02,07,200 ರೂಪಾಯಿ ದಂಡ ಸಂಗ್ರಹಿಸಿದ್ದಾರೆ. ದಾಖಲಾಗಿರುವ ಪ್ರಕರಣಗಳ ಪೈಕಿ ಅತಿ ಹೆಚ್ಚು ಕೇಸ್ ಹೆಲ್ಮೆಟ್ ರಹಿತ ವಾಹನ ಚಾಲನೆ ನಿಯಮ ಉಲ್ಲಂಘನೆಯದ್ದಾಗಿದ್ದು, 23,847 ಕೇಸ್ ದಾಖಲಾಗಿವೆ. ಹಿಂಬದಿ ಸವಾರನಿಗೆ ಹೆಲ್ಮೆಟ್ ರಹಿತ ಚಾಲನೆ 14,499, ಸಿಗ್ನಲ್ ಜಂಪ್ 8,686 ಕೇಸ್ ಸೇರಿದಂತೆ ಒಟ್ಟ 78,574 ಕೇಸ್ ದಾಖಲಿಸಲಾಗಿದೆ.
ಎರಡು ಗಂಟೆಯಲ್ಲಿ 29 ಲಕ್ಷ ರೂಪಾಯಿ ದಂಡ ಸಂಗ್ರಹ:
ಇಂದು ಮಧ್ಯಾಹ್ನ 11.30ರಿಂದ 11.30ರ ನಡುವೆ ನಗರದ 44 ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ 178 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ 6,247 ವಿವಿಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿ 29,47,500 ರೂ.ಗೂ ಹೆಚ್ಚು ದಂಡ ಸಂಗ್ರಹಿಸಿದ್ದಾರೆ.
ವಾಹನ ದಟ್ಟಣೆ ಸಮಯವಲ್ಲದ ವೇಳೆ ಕಾರ್ಯಾಚರಣೆ ನಡೆಸಿ ದಂಡ ಸಂಗ್ರಹಿಸಿರುವುದು ಮತ್ತೊಂದು ವಿಶೇಷ. ರಾಜಧಾನಿಯಲ್ಲಿ ಇತ್ತೀಚೆಗೆ ರಸ್ತೆ ಅಪಘಾತದ ಜೊತೆಗೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರಲ್ಲಿ ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.