ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೆ ದಿನಗಣನೆ ಆರಂಭವಾಗಿದೆ. ಮೇ 24ರೊಳಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಮುಗಿಯಲಿದೆ. ಈಗಿರುವ ಹಾಲಿ ಶಾಸಕರ ಹಣಕಾಸಿನ ಹಿನ್ನೆಲೆಯು ಹುಬ್ಬೇರಿಸುವಂತೆ ಇದೆ.
ವಿಧಾನಸಭಾ ಚುನಾವಣೆಗೆ ಹೊಸ್ತಿಲಲ್ಲಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಸ್ (ಎಡಿಆರ್) ಮತ್ತು ಕರ್ನಾಟಕ ಎಲೆಕ್ಷನ್ ವಾಚ್ ಎಂಬ ಸಂಸ್ಥೆಗಳು ಶಾಸಕರ ಹಣಕಾಸಿನ ಬಗ್ಗೆ ವಿಶ್ಲೇಷಣೆ ಮಾಡಿವೆ. ಒಟ್ಟಾರೆ 224 ಶಾಸಕರ ಪೈಕಿ ಎರಡು ಶಾಸಕ ಸ್ಥಾನಗಳು ಖಾಲಿ ಇದ್ದು, ಮೂವರು ಶಾಸಕರ ಚುನಾವಣಾ ಅಫಿಡವಿಟ್ಗಳು ಲಭ್ಯವಾಗಿಲ್ಲ. ಈ ಐವರನ್ನು ಹೊರತುಪಡಿಸಿ 219 ಹಾಲಿ ಶಾಸಕರ ಮಾಹಿತಿಯನ್ನು ಈ ಸಂಸ್ಥೆಗಳು ಬಹಿರಂಗ ಪಡಿಸಿವೆ.
209 ಹಾಲಿ ಶಾಸಕರು ಕೋಟ್ಯಾಧೀಶರು: 2018ರ ಚುನಾವಣೆಯಲ್ಲಿ ಸಲ್ಲಿಸಿದ ಅಫಿಡವಿಟ್ ಪ್ರಕಾರ 219 ಹಾಲಿ ಶಾಸಕರ ಪೈಕಿ ಶೇ.95ರಷ್ಟು ಎಂದರೆ 209 ಮಂದಿ ಶಾಸಕರು ಕೋಟ್ಯಾಧೀಶರಾಗಿದ್ದಾರೆ. ಈ ಬಗ್ಗೆ ತಾವೇ ಸಲ್ಲಿಸಿರುವ ಅಫಿಡವಿಟ್ಗಳಲ್ಲಿ ಶಾಸಕರು ಘೋಷಿಸಿಕೊಂಡಿದ್ದಾರೆ.
ಪಕ್ಷವಾರು ಮಾಹಿತಿ ನೋಡುವುದಾದರೆ ಬಿಜೆಪಿಯ 118 ಶಾಸಕರ ಪೈಕಿ 112 ಶಾಸಕರು (ಶೇ.95) ಕೋಟ್ಯಾಧಿಪತಿಗಳಾಗಿದ್ದಾರೆ. ಕಾಂಗ್ರೆಸ್ನ 67 ಶಾಸಕರ ಪೈಕಿ 65 ಶಾಸಕರು (ಶೇ.97) ಮತ್ತು ಜೆಡಿಎಸ್ನ 30 ಶಾಸಕರಲ್ಲಿ 28 ಮಂದಿ ಹಾಗೂ ಪಕ್ಷೇತರರಾದ ಎಲ್ಲ ನಾಲ್ವರು ಶಾಸಕರೂ ಕೂಡ ತಮ್ಮ ಸಂಪತ್ತು ಒಂದು ಕೋಟಿಗೂ ಅಧಿಕವಾಗಿದೆ ಎಂದು ಘೋಷಿಸಿದ್ದಾರೆ.
ಪಕ್ಷವಾರು ಸರಾಸರಿ ಸಂಪತ್ತು: ಎಲ್ಲ 219 ಶಾಸಕರ ಸರಾಸರಿ ಸಂಪತ್ತು 29.85 ಕೋಟಿಯಾಗಿದೆ. ಬಿಜೆಪಿಯ 118 ಶಾಸಕರ ಸರಾಸರಿ ಸಂಪತ್ತು 19.60 ಕೋಟಿ ಮತ್ತು ಕಾಂಗ್ರೆಸ್ನ 67 ಶಾಸಕರ ಸರಾಸರಿ ಸಂಪತ್ತು 48.58 ಕೋಟಿ ಹಾಗೂ ಜೆಡಿಎಸ್ನ 30 ಶಾಸಕರ ಸರಾಸರಿ ಸಂಪತ್ತು 26.87 ಕೋಟಿಯಾಗಿದ್ದು, ನಾಲ್ವರು ಪಕ್ಷೇತರ ಶಾಸಕರ ಸರಾಸರಿ ಸಂಪತ್ತು 40.92 ಕೋಟಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಮೂವರು ಶ್ರೀಮಂತ ಶಾಸಕರು: ಹಾಲಿ ಶಾಸಕರ ಪೈಕಿ ಮೂವರು ಅತಿ ಶ್ರೀಮಂತ ಶಾಸಕರು ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರ ಕ್ಷೇತ್ರದ ಶಾಸಕ ಡಿಕೆ ಶಿವಕುಮಾರ್ 840 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಬೆಂಗಳೂರಿನ ಹೆಬ್ಬಾಳ ಕ್ಷೇತ್ರದ ಸುರೇಶ್ ಬಿಎಸ್ 416 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಹಾಗೂ ವಿಜಯನಗರ ಕ್ಷೇತ್ರದ ಎಂ.ಕೃಷ್ಣಪ್ಪ 236 ಕೋಟಿಗೂ ಹೆಚ್ಚಿನ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ.
ಕಡಿಮೆ ಸಂಪತ್ತಿನ ಮೂವರು ಶಾಸಕರು: ಮೂವರು ಶಾಸಕರು ಕಡಿಮೆ ಸಂಪತ್ತಿನವರಾಗಿದ್ದು, ಇವರು ಲಕ್ಷಗಳಲ್ಲಿ ಆಸ್ತಿ ಹೊಂದಿದ್ದಾರೆ. ಇದರಲ್ಲಿ ಬಿಜೆಪಿಯ ಇಬ್ಬರು ಮತ್ತು ಕಾಂಗ್ರೆಸ್ನ ಒಬ್ಬರು ಸೇರಿದ್ದಾರೆ. ಮೈಸೂರಿನ ನಂಜನಗೂಡು ಕ್ಷೇತ್ರದ ಶಾಸಕ ಹರ್ಷವರ್ಧನ ಬಿ 22 ಲಕ್ಷಕ್ಕೂ ಅಧಿಕ ಮತ್ತು ಕೃಷ್ಣರಾಜ ಕ್ಷೇತ್ರದ ಎಸ್ಎ ರಾಮದಾಸ್ 39 ಲಕ್ಷಕ್ಕೂ ಹೆಚ್ಚು ಮತ್ತು ಬೆಂಗಳೂರಿನ ಜಯನಗರ ಕ್ಷೇತ್ರದ ಸೌಮ್ಯಾ ರೆಡ್ಡಿ 54 ಲಕ್ಷಕ್ಕೂ ಹೆಚ್ಚಿನ ಆಸ್ತಿಯನ್ನು ಘೋಷಿಸಿದ್ದಾರೆ.
ಅತಿ ಹೆಚ್ಚು ಸಾಲ ಹೊಂದಿರುವ ಶಾಸಕರು: 124 ಜನ ಶಾಸಕರು ತಾವು ಕೋಟಿಗೂ ಹೆಚ್ಚು ಸಾಲ ಹೊಂದಿರುವ ಬಗ್ಗೆಯೂ ಎಂದು ಪ್ರಕಟಿಸಿಕೊಂಡಿದ್ದಾರೆ. ಡಿಕೆ ಶಿವಕುಮಾರ್ 228 ಕೋಟಿಗೂ ಅಧಿಕ ಸಾಲ ಹೊಂದಿದ್ದರೆ, ಚನ್ನಪಟ್ಟಣ ಕ್ಷೇತ್ರದ ಶಾಸಕ ಹೆಚ್ಡಿ ಕುಮಾರಸ್ವಾಮಿ 104 ಕೋಟಿಗೂ ಹೆಚ್ಚು ಹಾಗೂ ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ 96 ಕೋಟಿಗೂ ಅಧಿಕ ಸಾಲವನ್ನು ಹೊಂದಿರುವುದಾಗಿ ಘೋಷಿಸಿದ್ದಾರೆ.
ಅಧಿಕ ಆದಾಯ ಹೊಂದಿರುವ ಶಾಸಕರು: ಮೂವರು ಶಾಸಕರು ತಮ್ಮ ಅಧಿಕ ಆದಾಯದ ಬಗ್ಗೆಯೂ ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದಾರೆ. ದಾವಣಗೆರೆ ಶಾಸಕ ಶಾಮನೂರ ಶಿವಶಂಕರಪ್ಪ 7 ಕೋಟಿ ರೂಪಾಯಿ ಮತ್ತು ಶಾಂತಿನಗರ ಕ್ಷೇತ್ರದ ಎನ್ಎ ಹ್ಯಾರಿಸ್ 7 ಕೋಟಿ ಹಾಗೂ ಬಾಗೇಪಲ್ಲಿಯ ಎಸ್ಎನ್ ಸುಬ್ಬಾರೆಡ್ಡಿ 6 ಕೋಟಿ ಆದಾಯದ ಮೂಲಗಳನ್ನು ಹೊಂದಿರುವುದಾಗಿ ಪ್ರಕಟಿಸಿದ್ದಾರೆ.