ಬೆಂಗಳೂರು: ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳ ಉಪಚುನಾವಣೆ ಘೋಷಣೆ ಹಿನ್ನೆಲೆ ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್ ಪಕ್ಷ ಇಂದು ಮಹತ್ವದ ಸಭೆ ಕರೆದಿದೆ.
ಗೋಕಾಕ್ ಕ್ಷೇತ್ರವೊಂದನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಲು ಈ ಸಭೆ ಕರೆಯಲಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಜೊತೆಗೆ ಸಭೆಯಲ್ಲಿ ಬೆಂಗಳೂರು ಜಿಲ್ಲೆ ಸೇರಿದಂತೆ ಉಪಚುನಾವಣೆ ನಡೆಯುವ ಎಲ್ಲಾ ಜಿಲ್ಲೆಗಳ ಕಾಂಗ್ರೆಸ್ ನಾಯಕರು, ಜಿಲ್ಲಾಧ್ಯಕ್ಷರು, ಮಾಜಿ ಸಚಿವರು, ಮಾಜಿ, ಹಾಲಿ ಶಾಸಕರು, ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಸಭೆಯ ಮುಖ್ಯ ಉದ್ದೇಶಗಳು:
ಶತಾಯಗತಾಯ ಕಾಂಗ್ರೆಸ್ ಕಳೆದುಕೊಂಡಿರುವ ಕ್ಷೇತ್ರಗಳನ್ನು ಮರಳಿ ಗೆದ್ದು, ಪಕ್ಷಕ್ಕೆ ಎದುರಾಗಿರುವ ಹಿನ್ನಡೆಯನ್ನು ಸರಿಪಡಿಸಿಕೊಳ್ಳುವುದು ಈ ಸಭೆಯ ಉದ್ದೇಶವಾಗಿದೆ. ಅಲ್ಲದೇ ಇತ್ತೀಚೆಗೆ ಕಾಂಗ್ರೆಸ್ ದುರ್ಬಲವಾಗುತ್ತಿದೆ ಎಂಬ ಮಾತಿಗೆ ಗೆಲುವಿನ ಮೂಲಕ ಪ್ರತ್ಯುತ್ತರ ನೀಡುವುದು. ಹಿನ್ನಡೆ ಅನುಭವಿಸಿ ಕುಗ್ಗಿರುವ ಕಾಂಗ್ರೆಸ್ ಕಾರ್ಯಕರ್ತರನ್ನು ಹುರಿದುಂಬಿಸಿ ಚುನಾವಣೆಗೆ ಅಣಿಗೊಳಿಸುವ ಕಾರ್ಯವನ್ನು ಮಾಡಲು ಈ ಸಭೆ ಕರೆಯಲಾಗಿದೆ.
ಈಗಾಗಲೇ ಅನರ್ಹ ಶಾಸಕರ ಕ್ಷೇತ್ರಗಳ ನಾಯಕರ ಜೊತೆ ಎರಡು ಸುತ್ತಿನ ಸಭೆ ನಡೆದಿದೆ. 3-4 ಅಭ್ಯರ್ಥಿಗಳ ಹೆಸರನ್ನು ಕೂಡ ಅಂತಿಮ ಮಾಡಲಾಗಿದೆ. ಇದೇ ತಿಂಗಳ ಅಂತ್ಯದೊಳಗೆ ನಾಮಪತ್ರ ಸಲ್ಲಿಕೆ ಆಗಬೇಕಿರುವುದರಿಂದ ಇಂದು ತರಾತುರಿಯಲ್ಲಿ ಅಭ್ಯರ್ಥಿ ಅಂತಿಮಗೊಳಿಸಿ, ಬಿಫಾರಂ ನೀಡುವ ಸಿದ್ಧತೆ ಮಾಡಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.