ಕನ್ನಡ ಚಿತ್ರರಂಗದ ದೊಡ್ಡ ಕನಸಾದ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಕಳೆದ ಬಜೆಟ್ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 500 ಕೋಟಿ ರೂಪಾಯಿ ವೆಚ್ಚದಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಹಣ ಮಂಜೂರು ಮಾಡಿದ್ದರು. ಇದರಿಂದ ಚಿತ್ರರಂಗ ಸಂತೋಷ ವ್ಯಕ್ತಪಡಿಸಿತ್ತು.
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಹಣ ಮಂಜೂರಾದರೂ ಎಲ್ಲಿ ನಿರ್ಮಾಣ ಮಾಡಬೇಕು ಎಂಬ ವಿಚಾರವೇ ಬಹಳ ದಿನಗಳಿಂದ ಚರ್ಚೆಯಾಗುತ್ತಿತ್ತು. ಆದರೆ ಇದಕ್ಕೆ ಈಗ ಪೂರ್ಣ ವಿರಾಮ ದೊರೆತಿದೆ. ಕನಕಪುರ ರಸ್ತೆಯ ರೋರಿಚ್-ದೇವಿಕಾ ರಾಣಿ ಎಸ್ಟೇಟ್ ಬದಲು ಹೆಸರಘಟ್ಟದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಅಶ್ವತ್ಧ್ ನಾರಾಯಣ ಸ್ಪಷ್ಟಪಡಿಸಿದ್ದಾರೆ. ಚಿತ್ರರಂಗದ ನಾಯಕತ್ವ ಸ್ಥಾನ ವಹಿಸಿಕೊಂಡ ನಂತರ ಶಿವರಾಜ್ಕುಮಾರ್ ನಿನ್ನೆ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರನ್ನು ಭೇಟಿ ಮಾಡಿ ಚಿತ್ರರಂಗದ ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಸಿದರು.
ಶಿವರಾಜ್ಕುಮಾರ್ ಅವರೊಂದಿಗೆ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಮಾತನಾಡಿದ ಡಿಸಿಎಂ ಅಶ್ವತ್ಥ್ ನಾರಾಯಣ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಕೊರೊನಾದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಚಿತ್ರರಂಗದ ಪುನಶ್ಚೇತನಕ್ಕೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು. ನಂತರ ಫಿಲ್ಮ್ ಸಿಟಿ ನಿರ್ಮಾಣದ ಬಗ್ಗೆ ಮಾತನಾಡಿದ ಡಿಸಿಎಂ, ದೇವಿಕಾ ರಾಣಿ ಎಸ್ಟೇಟ್ನಲ್ಲಿ ಪರಿಸರಾತ್ಮಕ ಸಮಸ್ಯೆಗಳು ಉಂಟಾಗಿರುವ ಕಾರಣ ಹೆಸರುಘಟ್ಟದ 150 ಎಕರೆ ಜಾಗದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಲಾಗುವುದು ಎಂದರು.
ಹೆಸರಘಟ್ಟದಲ್ಲಿ ಪಶುಸಂಗೋಪನಾ ಇಲಾಖೆಗೆ ಸೇರಿದ 450 ಎಕರೆ ಭೂಮಿ ಇದ್ದು, ಅದರಲ್ಲಿ 150 ಎಕರೆಯನ್ನು ಫಿಲ್ಮ್ ಸಿಟಿ ನಿರ್ಮಾಣಕ್ಕೆ ನೀಡುತ್ತಿದ್ದೇವೆ. ಫಿಲ್ಮ್ ಸಿಟಿ ಸಂಪರ್ಕಕ್ಕೆ ಬೇಕಾದ ರಸ್ತೆಯೊಂದನ್ನು ಮಾಡಿ ಆ ಜಾಗವನ್ನು ಫಿಲ್ಮ್ ಸಿಟಿಗೆ ಹಸ್ತಾಂತರ ಮಾಡಲಾಗುವುದು. ಈಗಾಗಲೇ ಇದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಿದ್ದು 5 ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಇನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಬಗ್ಗೆ ಮಾತನಾಡಿದ ಡಿಸಿಎಂ, ಈ ಬಗ್ಗೆ ಫಿಲ್ಮ್ ಚೇಂಬರ್ನವರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.