ಬೆಂಗಳೂರು: ರ‍್ಯಾಲಿ-ಪ್ರತಿಭಟನೆ ಮತ್ತು ಸಭೆ-ಸಮಾರಂಭಗಳಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸದೇ, ಕೇವಲ ದಂಡ ವಿಧಿಸುತ್ತಿರುವ ರಾಜ್ಯ ಸರ್ಕಾರದ ನಡೆಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮಂಗಳವಾರದಿಂದ ಎಫ್ಐಆರ್ ದಾಖಲಿಸುವಂತೆ ತಾಕೀತು ಮಾಡಿದೆ.
ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ವಕೀಲೆ ಗೀತಾ ಮಿಶ್ರಾ ಮತ್ತು ಲೆಟ್ಜ್‌ಕಿಟ್ ಫೌಂಡೇಷನ್ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪೀಠ, ಕೋವಿಡ್ ನಿಯಮ ಉಲ್ಲಂಘಿಸುವುದು ಕಂಡು ಬರುತ್ತಿದ್ದರೂ ರ‍್ಯಾಲಿ-ಪ್ರತಿಭಟನೆ ಮತ್ತು ಸಭೆ-ಸಮಾರಂಭ ನಡೆಸಲು ಅಧಿಕಾರಿಗಳು ಅನುಮತಿ ನೀಡುತ್ತಿದ್ದಾರೆ. ಅವುಗಳಲ್ಲಿ ಭಾಗಿಯಾದವರು ಮಾಸ್ಕ್ ಧರಿಸದೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡುತ್ತಿದ್ದಾರೆ. ಆದರೂ, ರ‍್ಯಾಲಿ ಸಂಘಟಕರ ವಿರುದ್ಧ ಕ್ರಮ ಜರುಗಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿತು.
ಓದಿ:ಚುನಾವಣೆ ನಡೆಯಬೇಕಿರುವ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿ ಕೇಳಿದ ಹೈಕೋರ್ಟ್
ಅಲ್ಲದೇ, ಮಾರ್ಗಸೂಚಿ ಉಲ್ಲಂಘಿಸಿದವರಿಗೆ ಕೇವಲ ದಂಡ ವಿಧಿಸಿ ಬಿಡಲಾಗುತ್ತಿದೆ. ಆದರೆ, ಅಷ್ಟು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ರ‍್ಯಾಲಿ ನಡೆಸಿದವರಿಗೆ ದಂಡ ಪಾವತಿಸಲು ಕಷ್ಟವಲ್ಲ. ಕೇವಲ ದಂಡ ವಿಧಿಸುವ ಮೂಲಕ ನಿಯಮ ಉಲ್ಲಂಘಿಸುವುದಕ್ಕೆ ಜನರಿಗೆ ಸರ್ಕಾರವೇ ಅವಕಾಶ ಮಾಡಿಕೊಡುತ್ತಿದೆ. ಸೋಂಕು ಮತ್ತೆ ಉಲ್ಬಣಿಸುತ್ತಿರುವ ಈ ಸಂದರ್ಭದಲ್ಲೂ ಲಕ್ಷಾಂತರ ಜನ ಒಂದೆಡೆ ಸೇರುತ್ತಿದ್ದಾರೆ. ಆದ್ದರಿಂದ ಮೊದಲು ರ‍್ಯಾಲಿ ಆಯೋಜಕರು ಮತ್ತು ಭಾಗವಹಿಸಿದವರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಅಡಿ ಎಫ್‌ಐಆರ್ ದಾಖಲಿಸಿ ನಂತರ ದಂಡ ವಸೂಲಿ ಮಾಡಬೇಕು ಎಂದು ಸೂಚಿಸಿದೆ.
ರ‍್ಯಾಲಿಯಲ್ಲಿ ಭಾಗವಹಿಸಿ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಎಲ್ಲರ ದಂಡ ಮೊತ್ತವನ್ನು ಆಯೋಜಕರಿಂದಲೇ ವಸೂಲಿ ಮಾಡಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡಿದ ಪೀಠ, ಈ ಸಂಬಂಧ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮಾ.24ಕ್ಕೆ ಮುಂದೂಡಿತು.
ಇದೇ ವೇಳೆ, ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದವರಿಗೆ ಗರಿಷ್ಠ 10 ಸಾವಿರ ರೂ.ವರೆಗೆ ದಂಡ ವಸೂಲಿ ಮಾಡಿ ಪ್ರಕರಣ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ತಂದಿರುವ ತಿದ್ದುಪಡಿ ಪ್ರಶ್ನಿಸಿ ಹೈಕೋರ್ಟ್‌ಗೆ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿ ವಿಚಾರಣೆ ನಡೆಸಿದ ಪೀಠ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು. ಜತೆಗೆ, ಮುಂದಿನ ವಿಚಾರಣೆ ವೇಳೆ ಸರ್ಕಾರದ ಪರ ರಾಜ್ಯ ಅಡ್ವೋಕೇಟ್ ಜನರಲ್ ಹಾಜರಿರಬೇಕು ಎಂದು ಸೂಚಿಸಿತು.