ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರದಿಂದ ಸರ್ಕಾರಿ ವೈದ್ಯರು ಹೋರಾಟ ನಡೆಸಲು ಸಜ್ಜಾಗಿದ್ದು, ರಾಜ್ಯ ಸರ್ಕಾರಕ್ಕೆ ತಲೆಬಿಸಿ ಶುರುವಾಗಿದೆ.
ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, 15 ರಿಂದ 21ರವರೆಗೆ ಜನರಿಗೆ ಕೊರೊನಾ ವರದಿ ಸಿಗೋದಿಲ್ಲ. ಅಷ್ಟೇ ಅಲ್ಲದೆ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ, ಹೆಚ್1ಎನ್1 ಸಂಬಂಧದ ಯಾವ ರಿಪೋರ್ಟ್ ಕೂಡ ಸಿಗೋದಿಲ್ಲ. ಈ ಕುರಿತು ಸರ್ಕಾರಕ್ಕೂ ಸಹ ಮಾಹಿತಿ ನೀಡದಿರಲು ತೀರ್ಮಾನಿಸಲಾಗಿದೆ.
ವೈದ್ಯರ ಪ್ರಮುಖ ಬೇಡಿಕೆಗಳನ್ನು ಗಮನಿಸುವುದಾದರೆ-ವೇತನ ತಾರತಮ್ಯ ಸರಿಪಡಿಸಬೇಕು, ಬೆಂಗಳೂರಿನ 48 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಿಬಿಎಂಪಿ ತೆಕ್ಕೆಯಿಂದ ಆರೋಗ್ಯ ಇಲಾಖೆಗೆ ಸೇರಿಸಬೇಕು. ಸರ್ಕಾರದಿಂದ ವೈದ್ಯರ ದಿನಾಚರಣೆ ಆಚರಿಸಬೇಕು, ಜಿಲ್ಲಾಸ್ಪತ್ರೆಗಳನ್ನು ಮೆಡಿಕಲ್ ಕಾಲೇಜು ವ್ಯಾಪ್ತಿಗೆ ಸೇರಿಸಬಾರದು, ವೈದ್ಯರ ವಿರುದ್ಧ ಆರೋಪ ಬಂದಾಗ ತನಿಖೆಗೂ ಮುನ್ನ ಅಮಾನತು ಮಾಡಬಾರದು, ಕೊರೊನಾ ಕರ್ತವ್ಯ ವೇಳೆ ಮೃತಪಟ್ಟಿರುವ ವೈದ್ಯರಿಗೆ ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಗಳನ್ನು ಇಟ್ಟಿದ್ದಾರೆ.