ಬೆಂಗಳೂರು: ಕಸ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಸಿನಿಮೀಯ ಶೈಲಿಯಲ್ಲಿ ಹೊಡೆದಾಟ ನಡೆದಿದ್ದು, ಮಾಟ-ಮಂತ್ರ ಮಾಡಿಸಿರುವ ಆರೋಪ ಸಹ ಕೇಳಿಬಂದಿದೆ.
ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನನಾಯಕಹಳ್ಳಿ ಬಳಿ ಕಸ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ನೆರೆಹೊರೆಯವರ ನಡುವೆ ಗಲಾಟೆ ನಡೆದಿದ್ದು, ಜಗಳಕ್ಕೆ ಮತ್ತೊಂದು ಕಾರಣ ಮನೆ ಮುಂದೆ ನಿಂಬೆಹಣ್ಣು ಹಾಕಿ ಮಾಟ ಮಾಡಿಸಿರುವುದು ಎನ್ನಲಾಗಿದೆ. ಗಾರ್ಮೆಂಟ್ಸ್ ನಡೆಸುತ್ತಿದ್ದ ಅನಿತಾ ಕುಟುಂಬಸ್ಥರ ಮೇಲೆ ನಿವೃತ್ತ ಎಸ್ಐಐ ಜವರೇಗೌಡ ಕುಟುಂಬಸ್ಥರು ಹಲ್ಲೆ ನಡೆಸಿದ್ದು, ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಜವರೇಗೌಡ ಮಕ್ಕಳಾದ ಆನಂದ್, ಕೋಮಲ ಎಂಬುವರ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಮೂರು ವರ್ಷಗಳಿಂದ ಅನಿತಾ, ಚನ್ನನಾಯಕಹಳ್ಳಿಯಲ್ಲಿ ಗಾರ್ಮೆಂಟ್ಸ್ ನಡೆಸುತ್ತಿದ್ದರು. ರೆಸಿಡೆನಿಯಲ್ಸ್ ಏರಿಯಾದಲ್ಲಿ ಗಾರ್ಮೆಂಟ್ಸ್ ಹೊಂದಿದ್ದರಿಂದ ನಿವೃತ್ತ ಎಎಸ್ಐ ಜವರೇಗೌಡ ಪ್ರಶ್ನಿಸುತ್ತಿದ್ದರಂತೆ. ಇದೇ ಕಾರಣಕ್ಕಾಗಿ ಗಾರ್ಮೆಂಟ್ಸ್ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿತ್ತು.
ಎಎಸ್ಐ ಮನೆ ಹಿಂಭಾಗದಲ್ಲಿ ಜಾಗ ಖಾಲಿ ಇದ್ದಿದ್ದರಿಂದ ಸ್ಥಳೀಯರು ಕಸ ತಂದು ಎಸೆಯುತ್ತಿದ್ದರು. ಗಾರ್ಮೆಂಟ್ಸ್ ಆರಂಭವಾದಾಗಿನಿಂದ ಆ ಜಾಗಕ್ಕೆ ರಸ್ತೆ ಮಾಡಿಸಲಾಗಿತ್ತು. ಹೀಗಿದ್ದರೂ ಖಾಲಿ ಜಾಗದಲ್ಲಿ ಕಸ ಹಾಕುತ್ತಿರುವ ಬಗ್ಗೆ ಜವರೇಗೌಡ ಕುಟುಂಬ ಅಕ್ರೋಶ ವ್ಯಕ್ತಪಡಿಸಿತ್ತು. ಈ ಮಧ್ಯೆ ಕಳೆದ ಗುರುವಾರ ಅನಿತಾ ಕುಟುಂಬಸ್ಥರು ಮನೆಯಲ್ಲಿ ಇಲ್ಲದಿರುವಾಗ ಲಕ್ಷ್ಮಮ್ಮ ಎಂಬುವರು ಮನೆ ಮುಂದೆ ಮಂತ್ರಿಸಿದ ನಿಂಬೆಹಣ್ಣು ಹಾಕಿದ್ದಾರೆ. ಮಾರನೇ ದಿನ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಇದನ್ನು ಅನಿತಾ ಕುಟುಂಬಸ್ಥರು ಪ್ರಶ್ನಿಸಿದ್ದಾರೆ.
ಈ ನಡುವೆ ಮಾತಿನ ಚಕಮಕಿ ನಡೆದಿದ್ದು ಕೈ-ಕೈ ಮಿಲಾಯಿಸಿಕೊಂಡಿದ್ದಾರೆ. ಗಲಾಟೆ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿ ದೃಶ್ಯ ಆಧಾರದ ಮೇಲೆ ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.