ಬೆಂಗಳೂರು : ಕೊರೊನಾ ಹೊಡೆತಕ್ಕೆ ಜನ ಸಾಮಾನ್ಯರು ಹಾಗೂ ಶೈಕ್ಷಣಿಕ ವರ್ಗ ಪೆಟ್ಟು ತಿಂದಿದೆ. ಒಂದು ಕಡೆ ಶಾಲಾರಂಭ ಮಾಡಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಾಲೆಗಳು ಮತ್ತೊಂದು ಕಡೆ ಕೋವಿಡ್ ಹೊಡೆತಕ್ಕೆ ಸಿಲುಕಿ ನಿರೋದ್ಯೋಗಿಗಳಾಗಿರುವ ಪೋಷಕರು. ಇವರಿಬ್ಬರ ಮಧ್ಯೆ ಶಾಲಾ ಶುಲ್ಕ ಜಟಾಪಟಿ ಯಾಕೋ ಮುಗಿಯುವ ಹಾಗೇ ಕಾಣ್ತಿಲ್ಲ.
ಕಳೆದ ಶೈಕ್ಷಣಿಕ ವರ್ಷದಲ್ಲಿ ಸರ್ಕಾರ ಮಧ್ಯೆ ಪ್ರವೇಶಿಸಿ ಶೇ.30ರಷ್ಟು ಶುಲ್ಕ ಕಡಿತ ಮಾಡಿ ಶೇ.70ರಷ್ಟು ಮಾತ್ರ ಶುಲ್ಕ ಕಟ್ಟಿಸಿಕೊಳ್ಳಬೇಕು ಅಂತಾ ಆದೇಶ ಮಾಡ್ತು. ಇದನ್ನ ಪ್ರಶ್ನಿಸಿ ಖಾಸಗಿ ಶಾಲೆಗಳು ಕೋರ್ಟ್ ಮೊರೆ ಹೋಗಬೇಕಾಯ್ತು. ಆಯಾ ಶಿಕ್ಷಣ ಸಂಸ್ಥೆಗಳು ಲಾಭವಿಲ್ಲದೇ ಶಾಲೆ ನಡೆಸಲು ಆಗುವುದಿಲ್ಲ. ಖರ್ಚು ವೆಚ್ಚಕ್ಕೆ ಪೂರಕವಾಗು ಶುಲ್ಕ ನಿಗದಿ ಮಾಡುವ ಅಧಿಕಾರ ಇದೆ ಅಂತಾ ಖಾಸಗಿ ಶಾಲೆಗಳು ವಾದಿಸಿದವು. ಶುಲ್ಕ ನಿಗದಿ ಸಮಿತಿ ರಚಿಸುವಂತೆ ಸದ್ಯ ಕೋರ್ಟ್ಗೆ ಸರ್ಕಾರ ಮನವಿ ಮಾಡಿದೆ.
ಈ ಮಧ್ಯೆ ಜುಲೈ ಒಂದರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಶುರುವಾಗಿದೆ. ಶಾಲೆಗಳಿಂದ ಹೆಚ್ಚುವರಿ ಶುಲ್ಕ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗಿದೆ. ಕೋವಿಡ್ ಕಾರಣದಿಂದ ಭೌತಿಕ ತರಗತಿಗಳು ಶುರುವಾಗದೇ ಇದ್ದರೂ, ಆನ್ಲೈನ್ ತರಗತಿಗಳು ನಡೆಯುತ್ತಿದೆ. ಹೀಗಾಗಿ, ಶಾಲಾ ಶುಲ್ಕ ಕಟ್ಟುವಂತೆ ಶಾಲಾಡಳಿತ ಮಂಡಳಿ ಪೋಷಕರ ಬೆನ್ನು ಬಿದಿದ್ದೆ. ಇತ್ತ ಪೋಷಕರು ಕೋವಿಡ್ ಸಂಕಷ್ಟದಲ್ಲಿ ಶುಲ್ಕ ಹೆಚ್ಚಳ ಮಾಡಿರುವುದನ್ನ ಖಂಡಿಸುತ್ತಿದ್ದಾರೆ.
ನಗರದ ಹೆಬ್ಬಾಳದಲ್ಲಿರುವ ಜೈನ್ ಹೆರಿಟೇಜ್ ಸ್ಕೂಲ್ನಲ್ಲಿ ಫೀಸ್ ಟಾರ್ಚರ್ ನೀಡುತ್ತಿದ್ದರೆಂದು ಪೋಷಕರು ಶಾಲಾ ಮುಂಭಾಗವೇ ಪ್ರತಿಭಟನೆ ನಡೆಸುತ್ತಿದ್ದಾರೆ. ಆನ್ಲೈನ್ ಶಿಕ್ಷಣಕ್ಕೆ ಹೆಚ್ಚುವರಿ ಶುಲ್ಕ ಕಟ್ಟುವಂತೆ ಆಡಳಿತ ಮಂಡಳಿಯಿಂದ ಒತ್ತಡ ಬರುತ್ತಿದೆ. ಫೀಸ್ ಕಟ್ಟಿಲ್ಲ ಅಂದರೆ ಆನ್ಲೈನ್ ಕ್ಲಾಸ್ ಕಡಿತ ಮಾಡುವ ಎಚ್ಚರಿಕೆಯನ್ನ ನೀಡಿದ್ದಾರೆ.
ಹೀಗಾಗಿ, ಇದರಿಂದ ಬೇಸತ್ತ ಪೋಷಕರು ಧರಣಿ ಕೂತು ಪ್ರಿನ್ಸಿಪಾಲ್ ಡೌನ್ ಡೌನ್ ಅಂತಾ ಕೂಗುತ್ತಿದ್ದಾರೆ. ಸದ್ಯ ಸ್ಥಳೀಯ ಪೊಲೀಸರು ಭೇಟಿ ನೀಡಿದ್ದು, ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಇತ್ತ, ಸಹಕಾರ ನಗರ ಸಮೀಪದಲ್ಲಿರುವ ನಾರಾಯಣ ಒಲಂಪಿಯಾಡ್ ಶಾಲೆಯಲ್ಲೂ ಶುಲ್ಕ ಒತ್ತಡ ವಿರೋಧಿಸಿ ಪೋಷಕರು ಮುಷ್ಕರ ನಡೆಸಲು ಮುಂದಾಗುತ್ತಿದ್ದಾರೆ.