ಬೆಂಗಳೂರು: ರೆಸಾರ್ಟ್ನಲ್ಲಿ ವಿಜಯನಗರ ಶಾಸಕ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕನಿಗೆ ಮತ್ತೊಂದು ರಿಲೀಫ್ ಸಿಕ್ಕಿದೆ. ಶಾಸಕ ಗಣೇಶ್ ಅವರ ಅಮಾನತು ಆದೇಶವನ್ನು ಕಾಂಗ್ರೆಸ್ ಹಠಾತ್ತನೇ ಹಿಂಪಡೆದಿದೆ.
ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ಮುನ್ನ ಅಮಾನತು ಆದೇಶ ಹಿಂಪಡೆದಿರುವ ಸಂದೇಶವನ್ನು ಕಾಂಗ್ರೆಸ್ ಪಕ್ಷ ಶಾಸಕ ಗಣೇಶ್ಗೆ ರವಾನಿಸಿದೆ ಎಂದು ತಿಳಿದುಬಂದಿದೆ.
ಆಪರೇಷನ್ ಕಮಲದ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನ ಮತ್ತು ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗ್ತಿದೆ. ಸ್ವಪಕ್ಷದ ಶಾಸಕನ ಮೇಲೆಯೇ ಹಲ್ಲೆ ನಡೆಸಿ ಕಾರಾಗೃಹ ಶಿಕ್ಷೆ ಅನುಭವಿಸಿ ಬಂದಿರುವ ಶಾಸಕ ಗಣೇಶ್ ವಿರುದ್ಧದ ಅಮಾನತು ಆದೇಶವನ್ನ ಕಾಂಗ್ರೆಸ್ ಹಿಂಪಡೆದಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅದ್ಯಕ್ಷ ದಿನೇಶ್ ಗುಂಡೂರಾವ್ ಪರಸ್ಪರ ಚರ್ಚಿಸಿ ಶಾಸಕ ಗಣೇಶ್ ಅವರ ಅಮಾನತು ಆದೇಶವನ್ನು ವಾಪಸ್ ಪಡೆಯಲಾಗಿದೆ ಎಂದು ಕಾಂಗ್ರೆಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತ ನಂತರ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಹೋಗಬೇಕು ಮತ್ತು ಶಾಸಕ ಗಣೇಶ್ ಅಮಾನತು ಮಾಡಿದ್ದಕ್ಕೆ ಸಿಟ್ಟಾಗಿ ಆಪರೇಷನ್ ಕಮಲದಲ್ಲಿ ಬಿಜೆಪಿಗೆ ಸೇರಿಬಿಡುತ್ತಾರೆನ್ನುವ ಆತಂಕದಿಂದ ಗಣೇಶ್ ಮನವೊಲಿಕೆಗೆ ಈ ಕ್ರಮವನ್ನು ಕೈಗೊಂಡಿದೆ ಎನ್ನಲಾಗ್ತಿದೆ.
ಕಳೆದ ಫೆಬ್ರವರಿ ಬಿಡದಿಯ ರೆಸಾರ್ಟ್ನಲ್ಲಿ ಆಪರೇಷನ್ ಕಮಲದಿಂದ ಶಾಸಕರನ್ನು ರಕ್ಷಿಸಿಕೊಳ್ಳಲು ತಂಗಿದ್ದ ಸಂದರ್ಭ ಶಾಸಕ ಗಣೇಶ್ ಅವರು ಶಾಸಕ ಆನಂದ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಬಳಿಕ ಬಂಧನಕ್ಕೊಳಗಾಗಿದ್ದ ಗಣೇಶ್, ಇತ್ತೀಚೆಗಷ್ಟೇ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು.