ಬೆಂಗಳೂರು: ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 14 ಜನ ಆರೋಪಿಗಳನ್ನು ಬಂಧಿಸಿ, 35 ಲಕ್ಷ ರೂ.ಗಳನ್ನು ಜಪ್ತಿ ಮಾಡಿದ್ದಾರೆ.
ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಸಿಸಿಬಿ ಪೊಲೀಸರು ಚಂದ್ರು ಹಾಗೂ ರಾಚಪ್ಪ ಎಂಬುವರನ್ನು ಬಂಧಿಸಿ, ಜ್ಞಾನಭಾರತಿ ಪೊಲೀಸ್ ಠಾಣೆಯ ಉಲ್ಲಾಳದಲ್ಲಿರುವ ಚಂದ್ರು ನಿವಾಸ ಮೇಲೆ ದಾಳಿ ನಡೆಸಿದಾಗ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳು ಪತ್ತೆಯಾಗಿದ್ದವು. ಈತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಬೆಂಗಳೂರು ಸೇರಿದಂತೆ ರಾಜ್ಯದ ಹಲವರಿಗೆ ಪ್ರಶ್ನೆ ಪತ್ರಿಕೆ ಕಳುಹಿಸಿದ್ದ ವಿಚಾರ ಬೆಳಕಿಗೆ ಬಂದಿತ್ತು.
ಈ ಸಂಬಂಧ ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ಮೂರು ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡು ಸಿಸಿಬಿ ಪೊಲೀಸರು 6 ಜನ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದರು. ಇದೀಗ ಆರೋಪಿಗಳ ಸಂಖ್ಯೆ14 ಕ್ಕೆ ಏರಿಕೆಯಾಗಿದೆ.
ಓದಿ: ಪ್ರಶ್ನೆ ಪತ್ರಿಕೆ ಸೋರಿಕೆ: ಇಂದು ನಡೆಯಬೇಕಿದ್ದ ಎಫ್ಡಿಎ ಪರೀಕ್ಷೆ ಮುಂದೂಡಿಕೆ
ಪ್ರಕರಣದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ ರಮೇಶ್ ಹೆಸರು ಕೇಳಿ ಬರುತ್ತಿದ್ದು, ಈತ ಆರೋಪಿಗಳಾದ ಚಂದ್ರು, ರಾಚಪ್ಪನ ಮೂಲಕ ಪ್ರಶ್ನೆಪತ್ರಿಕೆಗಳನ್ನು ರಾಜ್ಯದ ಮೂಲೆ ಮೂಲೆ ತಲುಪಿಸಿ, ಒಬ್ಬೊಬ್ಬರಿಗೆ 10 ಲಕ್ಷಕ್ಕೆ ಪ್ರಶ್ನೆಪತ್ರಿಕೆ ಮಾರಾಟ ಮಾಡುವ ಯೋಜನೆ ರೂಪಿಸಿಕೊಂಡಿದ್ದರು ಎಂಬ ಅಂಶ ಬಯಲಾಗಿದೆ. ಸದ್ಯ ನಾಪತ್ತೆಯಾಗಿರುವ ರಮೇಶ್ಗಾಗಿ ಸಿಸಿಬಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.