ಬೆಂಗಳೂರು: ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಆರೋಪಿ, ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ನೌಕರ ಚಂದ್ರುನನ್ನು ಸಿಸಿಬಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಖೆಡ್ಡಾಕ್ಕೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಇಂದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಎಫ್ಡಿಎ ಪರೀಕ್ಷೆ ನಿಗದಿಯಾಗಿತ್ತು. ಇದಕ್ಕೆ ಬೇಕಾದ ಎಲ್ಲಾ ರೀತಿಯ ಅಂತಿಮ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ನಡುವೆ ಸಿಸಿಬಿ ಪೊಲೀಸರಿಗೆ ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ವಿಚಾರ ಕಿವಿಗೆ ಬಿದ್ದಿದೆ. ಈ ನಿಟ್ಟಿನಲ್ಲಿ ಕಾರ್ಯಾಚರಣೆ ಕೈಗೊಂಡ ಎಸಿಪಿ ವೇಣುಗೋಪಾಲ್ ನೇತೃತ್ವದ ತಂಡ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.
ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಆರೋಪಿ ಚಂದ್ರು ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನ ಬಳಿ ಹೋಗಿದ್ದಾರೆ. ಆದರೆ ಅಪಾರ್ಟ್ಮೆಂಟ್ನ ಯಾವ ಫ್ಲ್ಯಾಟ್ನಲ್ಲಿದ್ದ ಎಂಬುದರ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ. ಬಳಿಕ ನಿರಂತರ ವೀಕ್ಷಣೆ ಮಾಡಿದ ಸಿಸಿಬಿ ಪೊಲೀಸರು, ನಾಲ್ಕು ಅಂತಸ್ತಿನ ಅಪಾರ್ಟ್ಮೆಂಟ್ನಲ್ಲಿ ಆರೋಪಿ ಇರುವುದನ್ನು ಪತ್ತೆಹಚ್ಚಿದ್ದಾರೆ.
ಅಪಾರ್ಟ್ಮೆಂಟ್ನ ಎಲ್ಲ ಮನೆಗಳನ್ನು ಪರಿಶೀಲಿಸಿದ ಬಳಿಕ ಎರಡನೇ ಮಹಡಿಯಲ್ಲಿರುವ ಫ್ಲ್ಯಾಟ್ ಸಂಪೂರ್ಣವಾಗಿ ಕರ್ಟನ್ನಿಂದ ಕವರ್ ಆಗಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ಹೊರಗಡೆ ಆರೋಪಿಗಾಗಿ ಎರಡು ಗಂಟೆಗಳ ಕಾಲ ಕಾದು ಕುಳಿತಿದ್ದರು. ಈ ವೇಳೆ ಹೊರ ಹೋಗಿದ್ದ ಚಂದ್ರು ಮನೆಗೆ ಬಂದು ಲಾಕ್ ಮಾಡಿಕೊಂಡಿದ್ದಾನೆ.
ಓದಿ:ಎಫ್ಡಿಐ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಬಂಧಿತರ ಸಂಖ್ಯೆ 14ಕ್ಕೆ ಏರಿಕೆ
ಅಪಘಾತವೆಂದು ಹೇಳಿ ಕಥೆ ಕಟ್ಟಿದ ಪೊಲೀಸರು:
ಮನೆಗೆ ಹೋಗಿದ್ದ ಚಂದ್ರುನನ್ನು ಬಲೆಗೆ ಬೀಳಿಸಿಕೊಳ್ಳಲು ಯೋಜನೆ ರೂಪಿಸುವ ಮಫ್ತಿಯಲ್ಲಿದ್ದ ಪೊಲೀಸರು ಮನೆ ಬಾಗಿಲು ಬಡಿದಿದ್ದಾರೆ. ಬಾಗಿಲು ತೆರೆದ ಆರೋಪಿಯ ತಾಯಿಗೆ ನಿಮ್ಮ ಮಗ ಚಂದ್ರು ಮಾರ್ಗ ಮಧ್ಯೆ ಬೇರೊಂದು ಗಾಡಿಗೆ ಗುದ್ದಿ ಬಂದಿದ್ದಾನೆ. ಹೀಗಾಗಿ ಬೈಕ್ ಡ್ಯಾಮೇಜ್ ಆಗಿದೆ ಎಂದು ಹೇಳಿ ಮನೆಯೊಳಗಡೆ ಹೋಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ತಾಯಿ ಮಗ ಮನೆಯಲ್ಲಿ ಇಲ್ಲ. ಬೈಕ್ ಆ್ಯಕ್ಸಿಡೆಂಟ್ ಮಾಡಿದ್ದಕ್ಕೆ ನಾನೇ ಹಣ ಕೊಡುವೆ ಎಂದಿದ್ದಾರೆ. ಮನೆಗೆ ನಿಮ್ಮ ಮಗ ಬಂದಿರುವುದನ್ನು ನಾವು ನೋಡಿದ್ದೇವೆ ಎಂದು ಹೇಳಿ ರೂಂನೊಳಗೆ ಹೋಗಿದಾಗ ಪ್ರಶ್ನೆಪತ್ರಿಕೆ ಸಮೇತ ಚಂದ್ರು ಸಿಕ್ಕಿಬಿದ್ದಿದ್ದಾನೆ.
ಎರಡನೇ ಆರೋಪಿ ರಾಚಪ್ಪ ಯಾರು?
ಪ್ರಕರಣದ ಎರಡನೇ ಆರೋಪಿಯಾಗಿರುವ ರಾಚಪ್ಪ ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ) ಹುದ್ದೆಗೆ ಆಯ್ಕೆ ಆಗಿದ್ದ. ಈ ನಡುವೆ ಎಫ್ಡಿಎ ನೇಮಕಗೊಂಡರೆ ಹೆಚ್ಚು ಹಣ ಸಂಪಾದಿಸಬಹುದು ಎಂದು ಲೆಕ್ಕಚಾರ ಹಾಕಿಕೊಂಡಿದ್ದ. ಇದಕ್ಕಾಗಿ ವಾಮಮಾರ್ಗ ಹಿಡಿದ ಈತ ಪ್ರಶ್ನೆಪತ್ರಿಕೆ ಪತ್ರಿಕೆ ಅವ್ಯವಹಾರದಲ್ಲಿ ಭಾಗಿಯಾಗಿದ್ದ. ಪ್ರಶ್ನೆಪತ್ರಿಕೆ ಹಿಡಿದುಕೊಂಡು ಒಬ್ಬ ಆಭ್ಯರ್ಥಿಗೆ 10 ಲಕ್ಷದಂತೆ ಮಾರಾಟಕ್ಕೆ ಮುಂದಾಗಿದ್ದ. ಸದ್ಯ ಪ್ರಶ್ನೆ ಪತ್ರಿಕೆ ಖರೀದಿ ಮಾಡಿದವರು ಸೇರಿದಂತೆ ಜಾಲದಲ್ಲಿ ತೊಡಗಿಸಿಕೊಂಡಿದ್ದ 14 ಮಂದಿ ಆರೋಪಿಗಳನ್ನು ಬಂಧಿಸಿ 35 ಲಕ್ಷ ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.