ಬೆಂಗಳೂರು: ಕನ್ನಡದ ಖ್ಯಾತ ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ "ಲೂಪ್" ಹೆಸರಿನ ಹೈಟೆಕ್ ಸ್ಟುಡಿಯೋ ಆರಂಭಿಸುವ ಮೂಲಕ ತಮ್ಮ ಬಹುದಿನದ ಕನಸು ನನಸಾಗಿಸಿಕೊಂಡರು. ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಸ್ಟುಡಿಯೋ ಉದ್ಘಾಟಿಸಿದರು.
ನಾಗರಬಾವಿಯಲ್ಲಿ ನಿರ್ಮಿಸಲಾಗಿರುವ ಸ್ಟುಡಿಯೋದಲ್ಲಿ ಎಡಿಟಿಂಗ್ ಗ್ರಾಫಿಕ್ಸ್, ಮ್ಯೂಸಿಕ್ ಸಿಸ್ಟಮ್ ಟೆಕ್ನಾಲಜಿ ಹಾಗೂ ಡಬ್ಬಿಂಗ್ ಸ್ಟುಡಿಯೋ ಸೌಕರ್ಯಗಳಿವೆ. ಸಾಧುಕೋಕಿಲ ತಮ್ಮ ಮಗ ಸುರಾಗ್ ನೇತೃತ್ವದಲ್ಲಿ ಸ್ಟುಡಿಯೋವನ್ನು ಡಿಸೈನ್ ಮಾಡಿಸಿದ್ದಾರೆ.
ಸ್ಟುಡಿಯೋ ಉದ್ಘಾಟಿಸಿದ ಎಸ್.ಪಿ ಬಾಲಸುಬ್ರಹ್ಮಣ್ಯಂ ಹಾಡಿನ ಮೂಲಕ ಸಾಧುಕೋಕಿಲ ಹಾಗೂ ಸುರಾಗ್‌ಗೆ ಶುಭಾಷಯ ತಿಳಿಸಿದರು. ಬಳಿಕ ಮಾತನಾಡಿದ ಅವರು, ಸಾಧುಕೋಕಿಲ ನನ್ನ ಶಿಷ್ಯ ಮಾತ್ರವಲ್ಲ,ಉತ್ತಮ ಸಂಗೀತ ನಿರ್ದೇಶಕ. ಆದರೆ ನಾನಿಲ್ಲಿಗೆ ಸಾಧುವಿನ ಶಿಷ್ಯನಾಗಿ ಬಂದಿದ್ದೇನೆ ಎಂದು ಹೇಳುವ ಮೂಲಕ ಸಾಧು ಸಂಗೀತದ ಹಾದಿಯಲ್ಲಿ ಮುಂದುವರಿಯುವಂತೆ ಕಿವಿಮಾತು ಹೇಳಿದರು.
ಈ ಹೈಟೆಕ್ ಸ್ಟುಡಿಯೋದ ಜವಾಬ್ದಾರಿಯನ್ನು ಸಾಧುಕೋಕಿಲ ಮಗ ಸುರಾಗ್ ವಹಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪ್ರೊಡಕ್ಷನ್ ಹೌಸ್ ಕಟ್ಟಿ ಕನ್ನಡದ ಪ್ರತಿಭಾನ್ವಿತರಿಗೆ ಅವಕಾಶ ಕಲ್ಪಿಸುವ ಮೂಲಕ ಉತ್ತಮ ಚಿತ್ರಗಳನ್ನು ತಯಾರಿಸುವ ಇರಾದೆ ವ್ಯಕ್ತಪಡಿಸಿದರು.