ಬೆಂಗಳೂರು: ಮಲಗಿದ್ದ ಮಗಳನ್ನು ದೊಣ್ಣೆಯಿಂದ ಹೊಡೆದು ತಂದೆಯೇ ಕೊಲೆ ಮಾಡಿರುವ ಘಟನೆ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಧನಲಕ್ಷ್ಮೀ ಲೇಔಟ್ ದಲ್ಲಿ ನಡೆದಿದೆ. 32 ವರ್ಷದ ಮಗಳು ಆಶಾ ಕೊಲೆಯಾದವರು. ನಿನ್ನೆ ರಾತ್ರಿ ಈ ಪ್ರಕರಣ ನಡೆದಿದ್ದು, ಕೊಲೆಗೈದ ಆರೋಪಿ ತಂದೆ ರಮೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಇಎಲ್ದಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ ಇತ್ತೀಚೆಗೆ ನಿವೃತ್ತಿ ಆಗಿದ್ದರು. ಮೃತ ಮಗಳು ಆಶಾ ಫ್ಯಾಷನ್ ಡಿಸೈನಿಂಗ್ ಕೋರ್ಸ್ದಲ್ಲಿ ಎಂಎಸ್ಸಿ ಮಾಡಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು.
ಯುವಕನನ್ನ ಪ್ರೀತಿಸಿ 2020ರಲ್ಲಿ ಪೋಷಕರ ವಿರೋಧದ ನಡುವೆಯೂ ಮದುವೆ ಮಾಡಿಕೊಂಡಿದ್ದರು. ಮದುವೆಯಾದ ಒಂದೇ ವರ್ಷದ ಅಂತರದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ದಂಪತಿ ದೂರವಾಗಿದ್ದರು. 2021ರಿಂದ ತಂದೆ ಮನೆಯಲ್ಲೇ ವಾಸ್ತವ್ಯ ಹೂಡಿದ್ದರು. ಆಶಾ, ಕ್ಷುಲ್ಲಕ ಕಾರಣಕ್ಕಾಗಿ ಪದೇ ಪದೆ ಕಿರಿ-ಕಿರಿ ಮಾಡುತ್ತಿದ್ದರು. ದಿನೇ ದಿನೆ ಮಗಳಿಂದ ಕಿರುಕುಳ ಹೆಚ್ಚಾಗಿತ್ತು. ಬುಧವಾರ ಸಹ ತಾಯಿ ಮಗಳೊಂದಿಗೆ ಗಲಾಟೆ ಮಾಡಿಕೊಂಡಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ರಮೇಶ್ ನಿನ್ನೆ ರಾತ್ರಿ ಮಲಗಿದ್ದ ಮಗಳಿಗೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಮೃತ ಆಶಾರ ತಂದೆ ರಮೇಶ್ ಅವರನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದರು. ಆರೋಪಿ ರಮೇಶ್ ಬಾಯ್ಬಿಟ್ಟಿರುವ ಪ್ರಕಾರ, ಮೊದ ಮೊದಲು ಸರಿಯಿದ್ದ ಮಗಳು ಪ್ರಾಪ್ತ ವಯಸ್ಸಿಗೆ ಬಂದ ಬಳಿಕ ಮನೆಯವರಿಗೆಲ್ಲಾ ವಿನಾಕಾರಣ ಕಿರುಕುಳ ನೀಡುತ್ತಿದ್ದಳು. ಸಣ್ಣ ಪುಟ್ಟ ವಿಚಾರಕ್ಕೂ ಸ್ವಾರ್ಥ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಳು. ಮದುವೆ ಮಾಡಿಸಿ ಸಾಗಿಸುವವರೆಗೂ ನೆಮ್ಮದಿ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಳಂತೆ.
ಇದೇ ವೇಳೆ ಆಶಾ 2020 ರಲ್ಲಿ ಯುವಕನನ್ನು ಪ್ರೀತಿಸಿದ್ದ ಕಾರಣ, ಮಗಳ ಮದ್ವೆ ಅವಳು ಎಂಬುದಕ್ಕಿಂತ ಹೆಚ್ಚಾಗಿ ಮೊದಲು ಹೊರ ಹೋದರೆ ಸಾಕು ಎಂಬ ಉದ್ದೇಶದಿಂದ ಪ್ರೀತಿಗೆ ಯಾವುದೇ ತಕರಾರು ಮಾಡದೆ ಮದುವೆ ಮಾಡಿ ಕಳಿಸಿದ್ದೆವು. ಆದ್ರೆ ಆಶಾ ಅಲ್ಲಿ ಕೂಡ ಸರಿಯಾಗಿ ಬಾಳ್ವೆ ಮಾಡದೆ ಮದ್ವೆಯಾಗಿ ಒಂದು ವರ್ಷಕ್ಕೆ ತವರು ಮನೆ ಸೇರಿಕೊಂಡಿದ್ದಳು. ಆಕೆ ಗಂಡನ ಮನೆಯಲ್ಲಿದ್ದಾಗ ಸ್ವಲ್ಪ ಮಟ್ಟಿಗೆ ನೆಮ್ಮದಿಯಿಂದಿದ್ದ ನಮಗೆ ಮತ್ತದೇ ಹಳೆ ಕಿರುಕುಳ ಶುರುವಾಗಿತ್ತು. ಒಂದರ್ಥದಲ್ಲಿ ಮಾನಸಿಕ ಅಸ್ವಸ್ಥಳಂತೆ ವರ್ತನೆ ಮಾಡ್ತಿದ್ದ ಆಶಾಳನ್ನ ನಮ್ಮ ಇಳಿ ವಯಸ್ಸಿನಲ್ಲಿ ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ.
ಸಣ್ಷ ಪುಟ್ಟ ವಿಚಾರಕ್ಕೂ ನಡೆಯುವ ಜಗಳದಿಂದ ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿತ್ತು. ನಿನ್ನೆ ಕೂಡ ಮೃತ ಆಶಾ ನನ್ನ ಹೆಂಡತಿ, ಹಾಗೂ ನಮ್ಮ ಕಿರಿಯ ಮಗಳು ಮತ್ತು ನನ್ನೊಂದಿಗೆ ಕಾರಣ ಇಲ್ಲದೆ ಜಗಳವಾಗಿತ್ತು. ಅಷ್ಟೂ ದಿನ ಇದೆಲ್ಲವನ್ನು ಸಹಿಸಿಕೊಂಡಿದ್ದೆವು. ಆದ್ರೆ ತಡರಾತ್ರಿ ಆಶಾ ಮಲಗಿದ ಬಳಿಕ ತಲೆಗೆ ಹೊಡೆದು ಕೊಂದು ಹಾಕಿದ್ದೇವೆ ತಂದೆ ರಮೇಶ್ ಪೊಲೀಸರ ಎದುರು ವಿವರಿಸಿದ್ದಾರೆ. ಅಲ್ಲದೆ, ಇದೊಂದು ಕೊಲೆ ಎಂದು ಗೊತ್ತಾಗದೆ ರೀತಿಯಲ್ಲಿದ್ದ ಕುಟುಂಬಸ್ಥರು, ಪೊಲೀಸ್ ತನಿಖೆಯಲ್ಲಿ ಅಸಲಿ ಸಂಗತಿಯನ್ನು ಬಾಯ್ಬಿಟ್ಟಿದ್ದಾರೆ.
ಇನ್ನು ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ತಂದೆ ರಮೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹತ್ಯೆಯಲ್ಲಿ ತಾಯಿ ಹಾಗು ತಂಗಿಯ ಪಾತ್ರ ಇದೆಯಾ ಎಂಬುದರ ಬಗ್ಗೆ ಕೊಡಿಗೇಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂಓದಿ:ನಿರ್ಮಾಪಕ ಉಮಾಪತಿ ಕೊಲೆಗೆ ಸಂಚು ರೂಪಿಸಿದ್ದ ಕುಖ್ಯಾತ ರೌಡಿ ಅರೆಸ್ಟ್