ಬೆಂಗಳೂರು: ವಿವಾದಿತ ಕೃಷಿ ಮಸೂದೆಗಳ ವಿರುದ್ಧ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಭಾರತ ಬಂದ್ಗೆ ಬೆಂಬಲ ಸೂಚಿಸಿ ಇಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಿವೆ.
ಎರಡು ರಾಜ್ಯ ರೈತ ಸಂಘಗಳು, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ ರೈತ ಕೃಷಿ ಕಾರ್ಮಿಕರ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಆಶಾ ಕಾರ್ಯಕರ್ತೆಯರು, ಜನಶಕ್ತಿ ಸಂಘಟನೆಗಳು ಸೇರಿದಂತೆ ಇತರೆ ರೈತ ಸಂಘಟನೆಗಳು ಸೆಪ್ಟೆಂಬರ್ 28ರಂದು ನಡೆಯಲಿರುವ ಕರ್ನಾಟಕ ಬಂದ್ ಪೂರ್ವಭಾವಿಯಾಗಿ ಶುಕ್ರವಾರ (ಸೆ.25) ಹೆದ್ದಾರಿ ತಡೆಗೆ ಮುಂದಾಗಿವೆ.
ಬಂದ್ಗೂ ಮುನ್ನ ರಾಜ್ಯದ ರೈತರು ಪ್ರತಿಭಟನೆ ಹಾಗೂ ರಸ್ತೆ ತಡೆ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬಿಸಿ ಮುಟ್ಟಿಸಲಿದ್ದಾರೆ. ಇಂದಿನ ಪ್ರತಿಭಟನೆಯಿಂದ ಬೆಂಗಳೂರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಲಿದೆ. ಬೆಂಗಳೂರು ಸಂಪರ್ಕಿಸುವ ರಾಜ್ಯ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ಥವಾಗಲಿದೆ.
ಬೆಂಗಳೂರು- ಮೈಸೂರು ಹೆದ್ದಾರಿ, ಬೆಂಗಳೂರು- ತುಮಕೂರು ಹೆದ್ದಾರಿ, ಬೆಂಗಳೂರು- ಹೊಸೂರು ಹೆದ್ದಾರಿ, ಬೆಂಗಳೂರು- ಹಾಸನ ಹೆದ್ದಾರಿ, ಹಳೆ ಮದ್ರಾಸ್ ರಸ್ತೆ, ಬೆಂಗಳೂರು-ಹೊಸಕೋಟೆ, ಬೆಂಗಳೂರು-ದೇವನಹಳ್ಳಿ ರಸ್ತೆ, ಬೆಂಗಳೂರು- ಹೊಸೂರು ಹೆದ್ದಾರೆ ಸೇರಿದಂತೆ ಇತರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರದಲ್ಲಿ ತೊಡಕಾಗಲಿದೆ.