ಬೆಂಗಳೂರು : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ಕೊಪ್ಪಳ, ಕೋಲಾರ, ಹಾಸನ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರದಿಂದ ಆಗಮಿಸಿದ ನೂರಾರು ರೈತರು ಮೌರ್ಯ ಸರ್ಕಲ್ನಲ್ಲಿ ಪ್ರತಿಭಟಿಸಿದರು.
ಕೊರೊನಾ ಮಹಾಮಾರಿ ಸಮಯದಲ್ಲೇ ಸರ್ಕಾರ ಕೃಷಿ ಮಸೂದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದು ರೈತರಿಗೆ ಮರಣ ಶಾಸನವಾಗಲಿದೆ. ಈ ಸುಗ್ರೀವಾಜ್ಞೆ ಮೂಲಕ ಸಣ್ಣ ಮತ್ತು ಮಧ್ಯಮ ವರ್ಗದ ರೈತರನ್ನು ಬೀದಿಪಾಲು ಮಾಡಲು ಸರ್ಕಾರ ಹೊರಟಿದೆ. ರಾಜ್ಯ ಹಾಲು ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದ್ದು, ರೈತರಿಗೆ ಆರ್ಥಿಕ ಸಂಪನ್ಮೂಲಕ್ಕೆ ದಾರಿಯಾಗಿರುವ ಈ ವ್ಯವಸ್ಥೆ ಖಾಸಗಿಕರಣಗೊಳಿಸುತ್ತಿರುವುದು ಅಪಾಯಕಾರಿ ಎಂದು ಪ್ರತಿಭಟನಾಕಾರು ಆಕ್ರೋಶ ಹೊರ ಹಾಕಿದ್ದಾರೆ.
ಇದಲ್ಲದೆ ಉತ್ತರ ಕರ್ನಾಟಕ ಭಾಗದ, ಬೆಳಗಾವಿಯ ಕೆಲ ಭಾಗಗಳು ನೆರೆ ಹಾವಳಿಗೆ ತುತ್ತಾಗಿದ್ದು, ಬೆಳೆ ನಾಶವಾದ ರೈತರಿಗೆ ಪರಿಹಾರ ನೀಡಿಲ್ಲ. ಕೊರೊನಾ ಅವಧಿಯಲ್ಲಿ ಘೋಷಿಸಿದ ಪ್ಯಾಕೇಜ್ಗಳೂ ರೈತರನ್ನು ತಲುಪಿಲ್ಲ ಎಂದು ಆರೋಪಿಸಿ ಪ್ರತಿಭಟಿಸಿದರು.
ಬಳಿಕ ಮಾತನಾಡಿದ ರೈತ ಪರ ಹೋರಾಟಗಾರ ಬಸವನಗೌಡ ಪೊಲೀಸ್ ಪಾಟೀಲ್, ರೈತರು ಮಳೆಯಿಂದ, ಕೊರೊನಾದಿಂದ ತತ್ತರಿಸಿ ಹೋದ್ರೂ ಸರ್ಕಾರ ಪರಿಹಾರ ಕೊಟ್ಟಿಲ್ಲ. ಬಿಜೆಪಿ ರೈತರ ಪಾಲಿಗೆ ಬಿಸಿಲು ಕುದುರೆ ಅಷ್ಟೇ.. ಜನಸಾಮಾನ್ಯರು ಮತ್ತು ರೈತರಿಗೆ ನ್ಯಾಯ ಸಿಗುವವರೆಗೂ ಸಂಘಟನೆ ಹೋರಾಟ ಮಾಡಲಿದೆ. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರದ ಎತ್ತಿನಹೊಳೆ ಏತ ನೀರಾವರಿ ಯೋಜನೆ ಕೂಡಲೇ ಜಾರಿ ಮಾಡಬೇಕು ಎಂದರು.
ಮಹಿಳಾ ರೈತ ಹೋರಾಟಗಾರ್ತಿ ನಾಗರತ್ನ ಮಾತನಾಡಿ, ರೈತರ ಹೆಸರಲ್ಲಿ ಅಧಿಕಾರ ತೆಗೆದುಕೊಂಡು ಇಂದು ಹೊಟ್ಟೆಗೆ-ಬಟ್ಟೆಗೆ ಇಲ್ಲದೆ ಉಳಿದುಕೊಳ್ಳಲು ಜಾಗ ಇಲ್ಲದೆ ಬೆಂಗಳೂರಿಗೆ ಬಂದು ಪ್ರತಿಭಟನೆ ಮಾಡುವಂತೆ ಮಾಡಿದೆ. ಜಿಜೆಪಿಯಿಂದ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಎಲ್ಲವೂ ಕೆಟ್ಟದಾಗಿದೆ. ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು. ಕೊಪ್ಪಳ ರೈತಸಂಘದ ಅಂದಪ್ಪ ಕೋಳೂರು ಮಾತನಾಡಿ, ಸರ್ಕಾರದಿಂದ ರೈತರಿಗೆ ಅನ್ಯಾಯವಾಗಿದೆ. ಹೆಚ್ಚು ಮಳೆಯಾಗಿ ಶೇಂಗಾ, ಈರುಳ್ಳಿ ಬೆಳೆ ಹಾನಿಯಾಗಿದೆ. ಆದರೆ, ಸರ್ಕಾರ ಪರಿಹಾರ ಕೊಟ್ಟಿಲ್ಲ ಎಂದರು.