ಬೆಂಗಳೂರು: ದೆಹಲಿಯಲ್ಲಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ ಫ್ರೀಡಂ ಪಾರ್ಕ್ನಲ್ಲಿ ರೈತ ಮುಖಂಡರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ, ಚಾಮರಸ ಮಾಲಿಪಾಟೀಲ್, ಎಸ್.ಆರ್.ಹಿರೇಮಠ, ಸಿರಿಮನೆ ನಾಗರಾಜ್, ನೂರ್ ಶ್ರೀಧರ್ ಹಾಗೂ ಹಲವು ಮುಖಂಡರು ಭಾಗಿಯಾಗಿದ್ದಾರೆ. ಸಂಜೆ 4 ಗಂಟೆಯವರೆಗೆ ಉಪವಾಸ ಸತ್ಯಾಗ್ರಹ ನೆಡೆಯಲಿದೆ.
ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದ ಜಾಗಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಅವರ ಪ್ರತಿಭಟನೆಗೆ ಸಾಥ್ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ನಾನು ಭಾಷಣ ಮಾಡಲು ಬಂದಿಲ್ಲ. ನನ್ನ ಸ್ನೇಹಿತರು ಕರೆದಿದ್ರು ಬೆಂಬಲ ವ್ಯಕ್ತಪಡಿಸಲು ಬಂದಿದ್ದೇನೆ. ಇವತ್ತು ಹುತಾತ್ಮರ ದಿನಾಚರಣೆ. ಮಹಾತ್ಮ ಗಾಂಧಿ ಹತ್ಯೆಯಾದ ದಿನವನ್ನು ನಾವು ಹುತಾತ್ಮ ದಿನವನ್ನಾಗಿ ಆಚರಿಸುತ್ತೇವೆ. ಮಹಾತ್ಮ ಗಾಂಧಿ ಯಾರ ವಿರುದ್ಧ ಹೋರಾಟ ಮಾಡಿದ್ರು ಅವ್ರ ಕೈಯಿಂದ ಹತ್ಯೆಯಾಗಲಿಲ್ಲ ಎಂದರು.
ಬ್ರಿಟೀಷರ ವಿರುದ್ಧ ಹೋರಾಡಿ, ಸ್ವಾತಂತ್ರ್ಯ ಚಳುವಳಿ ಜೊತೆಯಲ್ಲೇ ಬೇರೆ ವರ್ಗದ ಜನರ ಹೋರಾಟಕ್ಕೆ ಅಷ್ಟೇ ಪ್ರಾಮುಖ್ಯತೆ ಕೊಟ್ಟಿದ್ದರು. ಹತ್ಯೆಯಾಗೋದಕ್ಕೆ ಮೊದಲು ಅವರು ಉಪವಾಸ ಸತ್ಯಾಗ್ರಹವನ್ನು ಮಾಡಿದರು ಎಂದು ಮಹಾತ್ಮ ಗಾಂಧೀಜಿಯವರನ್ನು ನೆನೆದರು.
ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರೈತರು ನಡೆಸಿದ ಹೋರಾಟ ಪ್ರಾಮಾಣಿಕವಾಗಿದೆ. ರೈತರು ಸಾವಿಗೆ ಹೆದರುವವರಲ್ಲ, ಗುಂಡಿಗೆ ಹೆದರುವವರಲ್ಲ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದು ಹೊಸದಲ್ಲ. ಸಿಂದಗಿಯಲ್ಲೂ ನಡೆದಿತ್ತು, ಬಿಜೆಪಿಯ ಗುಂಡಾಗಳು ರೈತರ ಮೇಲೆ ಕಲ್ಲು ಹೊಡೆದರು, ರೈತರಿಗೆ ಇದು ಯಾವುದೂ ಗೊತ್ತಿಲ್ಲ. ಬಿಜೆಪಿಯವರಿಗೆ ಅಧಿಕಾರ ಪಡೆಯಲು, ಉಳಿಸಿಕೊಳ್ಳಲು ತಂತ್ರ-ಕುತಂತ್ರ ಕರಗತವಾಗಿದೆ ಎಂದು ಆರೋಪಿಸಿದರು.
ನರೇಂದ್ರ ಮೋದಿಯವರು ಕಾರ್ಪೋರೇಟ್ ಕಂಪನಿಯವರು ಏನ್ ಹೇಳ್ತಾರೆ ಅದನ್ನ ಮಾಡ್ತಾರೆ. ಜಿಡಿಪಿ ಮುಂದಿನ ವರ್ಷಕ್ಕೆ11% ಹೋಗುತ್ತಂತೆ. ಎಂತಾ ಲೆಕ್ಕ ಕೊಡ್ತಾರೆ ನೋಡಿ. ಮನಮೋಹನ್ ಸಿಂಗ್ ಕಾಲದಲ್ಲಿ 11%ವರೆಗೆ ಹೋಗಿತ್ತು ಜಿಡಿಪಿ, ಇವತ್ತು 4% ಇದೆ ಎಂದರು.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಲ್ಲ, ಸಬ್ ಕಾ ವಿನಾಶ್ ಅದು. ಜನರನ್ನ ದಾರಿ ತಪ್ಪಿಸಿ ಹಾಳು ಮಾಡ್ತಿದ್ದಾರೆ. ಜಿಡಿಪಿ ನೆಲಕಚ್ತಿದೆ. ಕೊರೊನಾ ಬಂದಾಗ ದೀಪ ಹಚ್ಚಿ ಚಪ್ಪಾಳೆ ತಟ್ಟಿ ಎಂದು ಹೇಳುವ ಪ್ರಧಾನಿಯನ್ನು ಜಗತ್ತಿನಲ್ಲಿ ಎಲ್ಲಾದ್ರು ನೋಡಿದ್ದೀರಾ ಎಂದು ವ್ಯಂಗ್ಯವಾಡಿದರು.