ಬೆಂಗಳೂರು : 2022 ರ ವಿದ್ಯುತ್ ಕಾಯ್ದೆ ಖಾಸಗೀಕರಣ ತಿದ್ದುಪಡಿ ಕೈಬಿಡಬೇಕು ಹಾಗೂ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಹುನ್ನಾರ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಮುಖಂಡರು ಬೆಂಗಳೂರು ವಿಧಾನಸೌಧ ಚಲೋ ನಡೆಸಿದರು. ಈ ವೇಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.
ಸಂಗೊಳ್ಳಿರಾಯಣ್ಣ ರೈಲ್ವೇ ನಿಲ್ದಾಣದ ಬಳಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಜಮಾಯಿಸಿದ ರೈತ ನಾಯಕರು ವಿಧಾನಸೌಧ ಚಲೋ ನಡೆಸಿ, ಫ್ರೀಡಂ ಪಾರ್ಕಿನ ಮೈದಾನದ ಬಳಿಯಿಂದ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ರೈತ ನಾಯಕರಾದ ಜಗಜೀತಸಿಂಗ್ ದಲ್ಲೇವಾಲ, ಶಿವಕುಮಾರ, ದೈವಸಿಗಾಮಣಿ, ಕೆ.ವಿ.ಬಿಜು, ಅಭಿಮನ್ಯು ಕೊಹಾರ ಸೇರಿದಂತೆ ನೂರಾರು ರೈತರನ್ನು ಬಂಧಿಸಿ ವಾಹನದಲ್ಲಿ ಕರೆದೊಯ್ದರು.
ಅತಿವೃಷ್ಟಿಯಿಂದ ರಾಜ್ಯದಲ್ಲಿ ಅಂದಾಜು 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಆದರೆ, ಕೇಂದ್ರ ತಂಡ ಕೇವಲ ನಾಮಕಾವಸ್ಥೆಗೆ ಪರಿಶೀಲನೆ ನಡೆಸಿದೆ. ಇನ್ನು ಮತ್ತೊಮ್ಮೆ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಳೆ ಹಾನಿ ಉಂಟಾಗಿರುವ ಹಳ್ಳಿಗಳಿಗೆ ಭೇಟಿ ನೀಡಿ, ಬೆಳೆ ನಷ್ಟದ ಬಗ್ಗೆ ಸಮರೋಪಾದಿಯಲ್ಲಿ ಸಮೀಕ್ಷೆ ನಡೆಸಿ, ನಷ್ಟದ ಅಂದಾಜಿನ ಸಂಪೂರ್ಣ ಪರಿಹಾರ ನೀಡಲು ಮುಂದಾಗಬೇಕು ಎಂದು ರೈತರು ಒತ್ತಾಯಿಸಿದರು.
ಮತ್ತೊಂದೆಡೆ ವಿಧಾನಸೌಧ ಚಲೋ ನಡೆಸಲು ಮುಂದಾಗಿದ್ದ ರೈತರು ವಶಕ್ಕೆ ಪಡೆದುಕೊಂಡಿರುವುದನ್ನು ವಿರೋಧಿಸಿ ಪಂಜಾಬ್ ನಲ್ಲಿ ಸ್ಥಳೀಯ ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ : ಆರ್ಎಸ್ಎಸ್ ಮುಖಂಡನ ಕಾರಿನ ಮೇಲೆ ಜಿಹಾದ್ ಎಂದು ಬರೆದು ಕೊಲೆ ಬೆದರಿಕೆ