ಯಲಹಂಕ (ಬೆಂಗಳೂರು): ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಮಾಡಿಯೇ ತೀರುತ್ತೇವೆ ಎಂದು ಪಟ್ಟು ಹಿಡಿದಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಿರುದ್ದ, ಯಾವುದೇ ಕಾರಣಕ್ಕೂ ಸೂಕ್ತ ಪರಿಹಾರ ನೀಡದೇ ಭೂಸ್ವಾಧೀನಕ್ಕೆ ಸಹಕರಿಸಲ್ಲ ಎಂದು ಯಲಹಂಕ ತಾಲೂಕಿನ 17 ಹಳ್ಳಿಗಳ ರೈತರು ದಶಕದಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇಂದು ಬಿಡಿಎ ಅಧಿಕಾರಿಗಳು ಪೊಲೀಸರ ಸಮೇತವಾಗಿ ಏಕಾಏಕಿ ಜೆಸಿಬಿಯೊಂದಿಗೆ ಕಾಮಗಾರಿಗೆ ಆಗಮಿಸಿದ್ದರು. ಇದಕ್ಕೆ ಅಡ್ಡಿಪಡಿಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದರು.
ವಿವರ: ಬಿಡಿಎ ಅಧ್ಯಕ್ಷರು ಬಡಾವಣೆ ನಿರ್ಮಾಣವನ್ನು ಶತಾಯಗತಾಯ ಮಾಡಿಯೇ ತೀರಲು ಲೇಔಟ್ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಇಂದು ಅಧಿಕಾರಿಗಳು ಪೊಲೀಸರೊಂದಿಗೆ ಕಾಮಗಾರಿಗೆ ಆಗಮಿಸಿದ್ದಾರೆ. ಸೂಕ್ತ ಪರಿಹಾರ ನೀಡದೇ ಕಾಮಗಾರಿಗೆ ಅವಕಾಶ ನೀಡಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಶ್ಯಾಮರಾಜಪುರ, ವೀರಸಾಗರ, ಬೆಟ್ಟಹಳ್ಳಿ ರೈತರ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ನೂರಾರು ರೈತ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು. ಯಲಹಂಕದ ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ಮುನೇಗೌಡ ರೈತರ ಪರ ಮಾತನಾಡಲು ಬಂದಾಗ ಅವರನ್ನೂ ವಶಕ್ಕೆ ಪಡೆಯಲಾಯಿತು.
ಹೋರಾಟಗಾರ್ತಿ ಲಾವಣ್ಯ ನರಸಿಂಹಮೂರ್ತಿ ಮಾತನಾಡಿ, "ರೈತರ ಒಪ್ಪಿಗೆ ಪಡೆದು ಬಡಾವಣೆ ನಿರ್ಮಾಣ ಮಾಡಲು ಭೂಮಿ ಸ್ವಾಧೀನ ಪಡೆಸಿಕೊಳ್ಳಬೇಕು. ಆದರೆ ಇದಕ್ಕೆ ರೈತರು ಒಪ್ಪಿಗೆ ಸೂಚಿಸಿಲ್ಲ. ರೈತರು ಅಧಿಕಾರಿಗಳೊಂದಿಗೆ ಮಾತನಾಡಲು ಸಿದ್ದರಿದ್ದಾರೆ, ಆದರೆ ಅಧಿಕಾರಿಗಳು ಬರುತ್ತಿಲ್ಲ. ಭೂಮಿ ಸ್ವಾಧೀನಪಡಿಸಿಕೊಳ್ಳುವ ಮೊದಲು ಇಲ್ಲಿಯ ಭೂಮಿಗೆ ಮಾರ್ಕೆಟ್ ದರ ಏನಿದೆಯೋ ಅದರ ನಾಲ್ಕು ಪಟ್ಟು ಪರಿಹಾರ ಘೋಷಣೆ ಮಾಡಬೇಕು. ಜಮೀನನ್ನೇ ನಂಬಿಕೊಂಡು ವ್ಯವಸಾಯ ಮಾಡುತ್ತಿರುವ ರೈತರಿಗೆ ಬೇರೆಡೆ ಜಮೀನು ಒದಗಿಸಿಕೊಡಬೇಕು. ಇದ್ಯಾವುದನ್ನು ಮಾಡದೇ ಬಿಡಿಎ ಅಧಿಕಾರಿಗಳು ಇಂದು ಏಕಾಏಕಿ ಜಮೀನಿಗೆ ನುಗ್ಗಿದ್ದು, ಹೋರಾಟ ಮಾಡಲು ಬಂದಂತಹ ರೈತರನ್ನು ವಶಕ್ಕೆ ಪಡೆದಿದ್ದಾರೆ" ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ಅತಂತ್ರ ಸ್ಥಿತಿ ಬೇಡ, ಸ್ಪಷ್ಟ ಬಹುಮತ ಬರಲಿ: ಜೆ.ಸಿ.ಮಾಧುಸ್ವಾಮಿ