ಬೆಂಗಳೂರು: ಇಂದಿನಿಂದ ವಿಧಾನಸಭಾ ಅಧಿವೇಶನ ಆರಂಭವಾಗಿದೆ. ಈ ಬೆನ್ನಲ್ಲೇ ಕೇಂದ್ರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯ ರೈತರು ವಿಧಾನಸೌಧ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆ ರಾಜ್ಯದ ನಾನಾ ಭಾಗಗಳಿಂದ ಕೆಎಸ್ಆರ್ ರೈಲ್ವೆ ನಿಲ್ದಾಣಕ್ಕೆ ರೈತರು ಆಗಮಿಸುತ್ತಿದ್ದಾರೆ.
ರೈತರ ರ‍್ಯಾಲಿ ಹಿನ್ನೆಲೆ ರೈಲ್ವೆ ನಿಲ್ದಾಣದಲ್ಲಿ ಓರ್ವ ಡಿಸಿಪಿ, 3 ಎಸಿಪಿ, 20 ಇನ್ಸ್‌ಪೆಕ್ಟರ್ ಸೇರಿ 600 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಈ ವೇಳೆ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಬಸವರಾಜ್ ಬೊಮ್ಮಾಯಿ ಹೊಸದಾಗಿ ಮುಖ್ಯಮಂತ್ರಿಯಾಗಿದ್ದಾರೆ.
ಅವರ ಮುಂದಿಡಲು ನಮ್ಮ ತಗಾದೆಗಳನ್ನು ಹೊತ್ತು ತಂದಿದ್ದೇವೆ. ರೈತರ ಪರ ಅನ್ನೋ ಮುಖ್ಯಮಂತ್ರಿಗಳಿಗೆ ನೈತಿಕತೆ ಇದ್ದರೆ, ಕೂಡಲೇ ರೈತ ವಿರೋಧಿ ಕಾನೂನುಗಳನ್ನ ವಾಪಸ್ ಪಡೆಯಲಿ ಎಂದು ಆಗ್ರಹಿಸಿದ್ರು. ಈ ಬಿಜೆಪಿ ಸರ್ಕಾರ ರೈತ ಪರ ಇಲ್ಲ. ಬದಲಿಗೆ ಬಂಡವಾಳ ಶಾಹಿಗಳ ಪರವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಲುವು ಖಂಡಿಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದರು.
ರಸ್ತೆಯಲ್ಲಿ ಕುಳಿತು ಪ್ರತಿಭಟನೆ
ರೈತರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿರುವುದರಿಂದ ಶೇಷಾದ್ರಿ ರಸ್ತೆ ಬಂದ್ ಆಗಿದೆ. ಮೆಜೆಸ್ಟಿಕ್ನಿಂದ ಕೆ.ಆರ್.ಸರ್ಕಲ್ ಸಂಪರ್ಕಿಸುವ ಶೇಷಾದ್ರಿ ರಸ್ತೆಯಲ್ಲಿ ವಾಹನಗಳ ಓಡಾಟ ಇಲ್ಲ. ಹಾಗಾಗಿ ಮೆಜೆಸ್ಟಿಕ್, ರೇಸ್ ಕೋರ್ಸ್, ಆನಂದ್ ರಾವ್ ಸರ್ಕಲ್ನಲ್ಲಿ ವಾಹನದಟ್ಟಣೆ ಹೆಚ್ಚಾಗಿದೆ.