ಬೆಂಗಳೂರು: ರೈತರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ರೆ ಅದಕ್ಕೆ ಅವಕಾಶ ಕೊಡುತ್ತಿದ್ದರು. ಆದರೆ ಯಾರೂ ಸಹ ಆ ಕೆಲಸ ಮಾಡಿಲ್ಲವೆಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ವಿಧಾನಸೌಧದಲ್ಲಿ ರೈತರ ಹೋರಾಟದ ಕುರಿತು ಮಾತನಾಡಿದ ಅವರು, ಸರ್ಕಾರ ರೈತರ ಪರವಾಗಿದೆ. ಹೆಚ್ಚು ಹೆಚ್ಚು ರೈತರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿದ್ದೇವೆ. ಈಗ ಹೋರಾಟ ಮಾಡುತ್ತಿರುವವರು ಎಲ್ಲರೂ ಬುದ್ಧಿವಂತರಿದ್ದಾರೆ. ಅವರಿಗೆ ಎಲ್ಲವೂ ಗೊತ್ತಿದೆ. ಅವರು ನಿಜವಾಗಿಯೂ ಇವತ್ತು ರಾಜ್ಯ ಸರ್ಕಾರದ ಪರವಾಗಿರಬೇಕಿತ್ತು ಎಂದರು.
ರೈತರ ಪರವಾಗಿ ವಿಜಯೋತ್ಸವ ಆಚರಿಸಿ ಕಾಯ್ದೆಗೆ ಬೆಂಬಲ ಸೂಚಿಸಬೇಕಿತ್ತು. ಅವರು ಧರಣಿಗೆ ಇಳಿದಿರುವುದು ದುರದೃಷ್ಟಕರ. ಸರ್ಕಾರ ತನ್ನ ನಿಲುವಿಗೆ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ನಿಂದ ಅವಿಶ್ವಾಸ ನಿರ್ಣಯ ಮಂಡನೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಿ ಸಿ ಪಾಟೀಲ್, ಅವಿಶ್ವಾಸ ನಿರ್ಣಯ ಮಂಡನೆ ಕಾಂಗ್ರೆಸ್ನವರ ಮೂರ್ಖತನವಾಗಿದೆ. ಅವರು ಸರ್ಕಾರದ ಮೇಲೆ ನಂಬಿಕೆ ಇಲ್ಲವೆಂದು ಹೇಳುತ್ತಿದ್ದಾರೆ. ಅವರ ನಂಬಿಕೆ ಇಟ್ಟುಕೊಂಡು ಆಡಳಿತ ನಡೆಸೋಕೆ ಆಗಲ್ಲ. ನಾವು ಜನಾದೇಶ ಪಡೆದಿದ್ದೇವೆ. ಜನರ ಪರವಾಗಿ ಕೆಲಸ ಮಾಡ್ತಿದ್ದೇವೆ ಎಂದು ಟಾಂಗ್ ಕೊಟ್ಟರು.