ಬೆಂಗಳೂರು: ರೈತರು ತಮ್ಮ ಬೆಳೆಗೆ ಸೂಕ್ತ ಬೆಲೆ ಸಿಗಲಿಲ್ಲ ಎಂದು ರಸ್ತೆಗೆ ಸುರಿದು, ಪ್ರತಿಭಟನೆ ನಡೆಸಿ ಬೆಳೆ ಹಾಳು ಮಾಡಿಕೊಳ್ಳುವ ಘಟನೆ ಸಾಮಾನ್ಯ. ಆದರೆ, ಇಲ್ಲೊಬ್ಬ ರೈತ ಮಹಿಳೆ ಸಾಮಾಜಿಕ ಜಾಲತಾಣದ ಮೂಲಕ ಸರ್ಕಾರದ ಗಮನ ಸೆಳೆದು, ಬೆಳೆಗೆ ಉತ್ತಮ ಬೆಲೆ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಹೌದು, ಬೆಳೆಗೆ ಬೆಲೆ ಸಿಗಲಿಲ್ಲ ಎಂದು ಬೀದಿಗೆ ಎಸೆಯದೇ ಸಾಮಾಜಿಕ ಜಾಲತಾಣದಲ್ಲಿ ಸಮಸ್ಯೆ ಹೇಳಿಕೊಂಡು ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಚಿತ್ರದುರ್ಗದ ಮಹಿಳೆಯ ಮಾಡಿದ್ದಾರೆ. 'ದೇಶಕ್ಕೇ ಲಾಕ್ ಡೌನ್ ಇದ್ದರೂ ರೈತರಿಗೆ ಇಲ್ಲ. ಪ್ರಧಾನಿಯಿಂದ ಸೈನಿಕರವರೆಗೂ ಎಲ್ಲರಿಗೂ ಸಿಗುವ ಆಹಾರ ಉತ್ಪಾದನೆ ಮಾಡುವುದು ರೈತ. ಲಾಕ್ ಡೌನ್ ಅಂತಾ ರೈತ ಬೆಳೆ ಬೆಳೆಯುವುದು ನಿಲ್ಲಿಸಿಲ್ಲ. ಆದ್ರೆ, ಲಾಕ್ ಡೌನ್ ಅಂತಾ ನಮ್ಮ ಬೆಳೆಗೆ ಬೆಲೆ ಇಲ್ಲದಾಗಿದೆ' ಎನ್ನುವ ಮಹಿಳೆಯ ಮನಮುಟ್ಟುವ ಹೇಳಿಕೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಕರಗಿದ್ದಾರೆ.
ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸುವಂತೆ ಸಿಎಂಗೆ ರೈತ ಮಹಿಳೆ ಮನವಿ: ವಿಡಿಯೋ ವೈರಲ್
ರೈತ ಮಹಿಳೆಯ ಜಾಣ್ಮೆಗೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸರ್ಕಾರದ ವತಿಯಿಂದಲೇ ಸೂಕ್ತ ಬೆಲೆ ನೀಡಿ ಬೆಳೆ ಖರೀದಿಗೆ ಸೂಚಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ರೈತ ಮಹಿಳೆ ವಸಂತ ಎಂಬುರು ತಾವು ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಅಂತ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದರು. ಮಹಿಳೆಯ ವಿಡಿಯೋ ವೀಕ್ಷಿಸಿದ ಮುಖ್ಯಮಂತ್ರಿ ಅವರು, ರೈತ ಮಹಿಳೆಗೆ ಕರೆ ಮಾಡಿ ಮಾತನಾಡಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ನೀವು ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ದೊರಕಿಸಿಕೊಡುತ್ತೇನೆ ಧೈರ್ಯದಿಂದ ಇರಿ ಎಂದು ಸಿಎಂ ಅವರು ಮಹಿಳೆಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ನಂತರ ಚಿತ್ರದುರ್ಗ ಜಿಲ್ಲಾಧಿಕಾರಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಮುಖ್ಯಮಂತ್ರಿಗಳು, ಕೂಡಲೇ ಆ ಹಳ್ಳಿಗೆ ಭೇಟಿ ನೀಡಿ ಆಕೆಯ ಕಷ್ಟ ಆಲಿಸುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಇತರೆ ರೈತರು ಈರುಳ್ಳಿ ಬೆಳೆದು ತೊಂದರೆಗೀಡಾಗಿದ್ದರೆ ಕೂಡಲೇ ಸರ್ಕಾರದ ವತಿಯಿಂದ ಖರೀದಿಸುವಂತೆ ತಿಳಿಸಿದ್ದಾರೆ.