ಬೆಂಗಳೂರು: ರಾಜ್ಯದಲ್ಲಿ ನಡೆದ ಆಪರೇಷನ್ ಕಮಲದ ತನಿಖೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಆಗ ನಿಜವಾದ 'ಮೀರ್ ಸಾದಿಕ್' ಯಾರು ಎನ್ನುವುದು ಬಯಲಾಗುತ್ತದೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವ ಬಗ್ಗೆ ತನಿಖೆ ನಡೆಸಲಿ. ಇಲ್ಲಿ ಮೀರ್ ಸಾದಿಕ್ ಯಾರು ಎನ್ನುವುದನ್ನು ನಾವು ಸಾಬೀತು ಪಡಿಸುತ್ತೇವೆ. ನಮ್ಮ ಆರೋಪ ಸುಳ್ಳಾದರೆ ನೀವು ಹೇಳಿದ ಶಿಕ್ಷೆ ಅನುಭವಿಸಲು ನಾವು ಸಿದ್ಧವಿದ್ದೇವೆ. ಒಂದೊಮ್ಮೆ ಭ್ರಷ್ಟಾಚಾರದಿಂದ ಅಧಿಕಾರಕ್ಕೆ ಬಂದಿದೆ ಎನ್ನುವುದು ಸಾಬೀತಾದರೆ ಸಿಎಂ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಲಿ ನಿಮ್ಮ ಬಳಿ ಇರುವ ದಾಖಲೆಯನ್ನು ಪಡೆದು ಬನ್ನಿ, ನಮ್ಮ ಬಳಿ ಇರುವ ದಾಖಲೆ ನಾವು ಪ್ರದರ್ಶಿಸುತ್ತೇವೆ ಎಂದರು.
ಕಳೆದ ಒಂದು ವರ್ಷದ ಅವಧಿಯಲ್ಲಿ ಮುನಿರತ್ನ ಆಸ್ತಿ ಮೊತ್ತ 35 ಕೋಟಿ ರೂ. ಹೆಚ್ಚಳವಾಗಿದೆ. ಇವರ ಜೀವಮಾನದಲ್ಲೇ ವರ್ಷಕ್ಕೆ ಐದಾರು ಕೋಟಿಗಿಂತ ಹೆಚ್ಚು ಆಸ್ತಿ ಹೆಚ್ಚಾಗದವರು ಏಕಾಏಕಿ ಇಷ್ಟು ಸಂಪಾದಿಸಿದ್ದು ಹೇಗೆ? ಎಷ್ಟೇ ಸಿನಿಮಾ ಮಾಡಿದ್ದರೂ ಅಷ್ಟೊಂದು ಸಂಪಾದಿಸಲು ಸಾಧ್ಯವಿಲ್ಲ. ಈ ಹೆಚ್ಚಳದ ಮೊತ್ತ ಆಪರೇಷನ್ ಕಮಲದಿಂದ ಬಂದ ಮೊತ್ತ. ಕಪ್ಪು ಹಣವನ್ನು ಬೇರೆ ಬೇರೆ ರೀತಿ ಪರಿವರ್ತಿಸಿಕೊಂಡಿದ್ದಾರೆ. ಇಲ್ಲಿ ದೊಡ್ಡ ಮೊತ್ತದ ಭ್ರಷ್ಟಾಚಾರವಾಗಿದೆ. ರಾಜ್ಯ ಚುನಾವಣಾ ಆಯೋಗ ಪಾರದರ್ಶಕವಾಗಿದ್ದರೆ ಇದೇ ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ಮುನಿರತ್ನ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸುಮೋಟು ಪ್ರಕರಣ ದಾಖಲಿಸಿಕೊಂಡು, ಸಿಬಿಐಗೂ ಪ್ರಕರಣದ ಮಾಹಿತಿ ನೀಡಿ ಮುನಿರತ್ನ ಆರ್ಥಿಕ ಸ್ಥಿತಿ ಏಕಾಏಕಿ ಹೇಗೆ ಹೆಚ್ಚಾಗಿದೆ ಎನ್ನುವುದರ ತನಿಖೆ ನಡೆಸಬೇಕು. ಸದ್ಯ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಸೋಲಿನ ಭೀತಿ ಎದುರಾಗಿದೆ. ಹೀಗಾಗಿ ಬೇರೆ ಕಡೆಗಳಿಂದ ಜನರನ್ನು ಕರೆಸಿ ನಮ್ಮ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಗಾಯಗಳಾಗಿವೆ. ನಮ್ಮವರು ಈಗಾಗಲೇ ದೂರು ನೀಡಿದ್ದಾರೆ. ದೂರು ಸ್ವೀಕರಿಸಿ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಡಿಸಿಎಂ ಅಶ್ವತ್ಥನಾರಾಯಣ ಬಳಸಿರುವ ಮೀರ್ ಸಾದಿಕ್ ಶಬ್ಧಕ್ಕೆ ವಿವರಣೆ ನೀಡಬೇಕು. ಇಲ್ಲವೇ ಆಡಿದ ಮಾತನ್ನು ವಾಪಸ್ ಪಡೆಯಬೇಕು. ನೀವು ಬೆಂಗಳೂರು ನಗರದಲ್ಲಿ, ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಏನೇನು ಅವ್ಯವಹಾರ ಮಾಡಿದ್ದೀರಿ ಎನ್ನುವ ವಿವರ ನಮ್ಮ ಬಳಿ ಇದೆ. ಸೂಕ್ತ ನ್ಯಾಯಾಂಗ ತನಿಖೆಗೆ ಬಿಜೆಪಿಯವರು ಮುಂದಾಗಬೇಕು. ಆಗ ಯಾರು ಸರಿ, ಯಾರು ತಪ್ಪು ಎನ್ನುವುದು ಗೊತ್ತಾಗಲಿದೆ ಎಂದರು.
ರಾಜ್ಯದಲ್ಲಿ ಎರಡು ವಿಧಾನಸಭೆ ಉಪಚುನಾವಣೆ ಹಾಗೂ ನಾಲ್ಕು ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಕಾಣಿಸುತ್ತಿದೆ. ಬಿಜೆಪಿ ವಿರುದ್ಧದ ಅಲೆ ಕಾಣುತ್ತಿದೆ. ಕಳೆದ 1 ವರ್ಷ 4 ತಿಂಗಳ ಕಾಲಾವಧಿಯಲ್ಲಿ ರಾಜ್ಯದಲ್ಲಿ ಸೂಕ್ತ ಆಡಳಿತ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರ ಕೂಡ ವೈಫಲ್ಯಗೊಂಡಿದೆ. ಕೊರೊನಾ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ. ಜನರ ಸಮಸ್ಯೆ ಪರಿಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಈ ಸಂದರ್ಭ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಜನ ಬೇಸರಗೊಂಡಿದ್ದಾರೆ. ಇದರಿಂದ ಜನರ ಗಮನ ಸೆಳೆಯಲು ಬಿಜೆಪಿಯ ನಾಯಕರು ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ.