ಬೆಂಗಳೂರು: ಚೀನಾದ ಹಾಂಗ್ಜೋನಲ್ಲಿ ನಡೆಯಲಿರುವ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡದ ಆಟಗಾರರಿಗೆ 'ಸುನೆಹ್ರಾ ಸಫರ್ - ರೋಡ್ ಟು ಹಾಂಗ್ಜೋ ಏಷ್ಯನ್ ಗೇಮ್ಸ್' ಎಂಬ ಹೆಸರಿನ ಕಾರ್ಯಕ್ರಮದ ಮೂಲಕ ವಿಶೇಷ ಬೀಳ್ಕೊಡುಗೆ ನೀಡಿದ ಹಾಕಿ ಇಂಡಿಯಾ ಫೆಡರೇಶನ್, ಆಟಗಾರರ ಪೋಷಕರು, ಕುಟುಂಬ ಸದಸ್ಯರನ್ನು ಸನ್ಮಾನಿಸಿತು. ಪ್ರತಿಷ್ಠಿತ ಟೂರ್ನಿಗಾಗಿ ಹಾಕಿ ತಂಡಗಳು ವಹಿಸಿದ ಶ್ರಮ, ತಯಾರಿಯನ್ನು ಹಾಕಿ ಇಂಡಿಯಾ ಫೆಡರೇಶನ್ ವಿಶೇಷವಾಗಿ ಸ್ಮರಿಸಿದ್ದು, ಆಟಗಾರರನ್ನು ಹುರಿದುಂಬಿಸಿದೆ.
ಕಾರ್ಯಕ್ರಮದಲ್ಲಿ ಒಡಿಶಾ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ, ಕ್ರೀಡೆ ಮತ್ತು ಯುವಜನ ಸೇವೆಗಳು ಹಾಗೂ ಗೃಹ ಖಾತೆಯ ಸಚಿವ ತುಷಾರಕಾಂತಿ ಬೆಹೆರಾ, ಹಾಕಿ ಇಂಡಿಯಾ ಅಧ್ಯಕ್ಷ ಡಾ.ದಿಲೀಪ್ ಟಿರ್ಕಿ, ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಭೋಲಾನಾಥ್ ಸಿಂಗ್, ಹಾಕಿ ಇಂಡಿಯಾದ ಕಾರ್ಯನಿರ್ವಾಹಕ ಸದಸ್ಯರು, ಮಾಜಿ ಆಟಗಾರರು ಮತ್ತು ಟೂರ್ನಿಯಲ್ಲಿ ಕಾರ್ಯನಿರ್ವಹಿಸಲಿರುವ ಭಾರತದ ತಾಂತ್ರಿಕ ಅಧಿಕಾರಿಗಳು, ಅಂಪೈರ್‌ಗಳು ಇದ್ದರು.
ತುಷಾರಕಾಂತಿ ಬೆಹೆರಾ ಮಾತನಾಡಿ, “ಹಾಕಿ ತಂಡಗಳಿಗೆ ಬೀಳ್ಕೊಡುಗೆ ನೀಡಲು ಇಲ್ಲಿಗೆ ಬಂದಿರುವುದು ತುಂಬಾ ಸಂತೋಷವಾಗಿದೆ. ಪುರುಷರ ಮತ್ತು ಮಹಿಳಾ ತಂಡಗಳ ಇತ್ತೀಚಿನ ಯಶಸ್ಸನ್ನು ಹತ್ತಿರದಿಂದ ನೋಡಿದ ನಂತರ, ಖಂಡಿತವಾಗಿಯೂ ಅವರು ಪ್ರಶಸ್ತಿಗಳನ್ನು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ" ಎಂದರು.
ಹಾಕಿ ಇಂಡಿಯಾ ಅಧ್ಯಕ್ಷ ಡಾ.ದಿಲೀಪ್ ಟಿರ್ಕಿ ಮಾತನಾಡಿ, "ಸುನೆಹ್ರಾ ಸಫರ್ ಕಾರ್ಯಕ್ರಮವು ಭಾರತದಿಂದ ಚೀನಾದ ಹಾಂಗ್ಜೋಗೆ ತಂಡದ ಪ್ರಯಾಣವನ್ನು ಸೂಚಿಸುತ್ತದೆ. ಮಾತ್ರವಲ್ಲ, ಇದು ತಮ್ಮ ಕುಟುಂಬಗಳಿಂದ ದೂರವಿದ್ದು ಕಠಿಣ ಪರಿಶ್ರಮವಹಿಸಿದ ಆಟಗಾರರ ಸಮರ್ಪಣೆ ಮತ್ತು ತ್ಯಾಗವನ್ನು ತೋರಿಸುತ್ತದೆ. ಈ ಚಾಂಪಿಯನ್‌ಗಳನ್ನು ಬೆಳೆಸುವುದರ ಹಿಂದಿರುವ ಅವರ ಕುಟುಂಬದ ಸದಸ್ಯರ ಪ್ರಯತ್ನವನ್ನು ಗೌರವಿಸುವ ಕ್ಷಣವಿದು" ಎಂದು ಹೇಳಿದರು.
ಪುರುಷರ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮಾತನಾಡಿ, "ಇದು ನಿಜವಾಗಿಯೂ ಅದ್ಭುತ ಕ್ಷಣ. ನನ್ನ ಕುಟುಂಬ ಈ ಸಂಭ್ರಮಾಚರಣೆಯ ಭಾಗವಾಗಿರುವುದು ಸ್ಮರಣೀಯ ಮತ್ತು ವಿಶೇಷವಾಗಿದೆ. ದೇಶಕ್ಕೆ ಪ್ರಶಸ್ತಿಗಳನ್ನು ತರಲು ಇದು ನಮ್ಮನ್ನು ಪ್ರೇರೇಪಿಸಿದೆ" ಎಂದು ತಿಳಿಸಿದರು.
"ಹಾಕಿ ಇಂಡಿಯಾದ ಅಚಲ ಬೆಂಬಲ ಮತ್ತು ಸಮರ್ಪಣೆಯನ್ನು ಈ ಕಾರ್ಯಕ್ರಮ ಸಾಬೀತುಪಡಿಸುತ್ತಿದೆ. ಈ ಮನ್ನಣೆ ಮತ್ತು ಪ್ರೋತ್ಸಾಹಕ್ಕಾಗಿ ಇಂದು ಹಾಜರಿರುವ ಎಲ್ಲಾ ಆಟಗಾರರು ತಮ್ಮ ಕುಟುಂಬದ ಪರವಾಗಿ ಕೃತಜ್ಞತೆಗಳು. ಉತ್ಸಾಹದಿಂದ ಈ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧರಿದ್ದೇವೆ'' ಎಂದು ಮಹಿಳಾ ತಂಡದ ನಾಯಕಿ ಸವಿತಾ ಹೇಳಿದರು.
ಇದೇ ಸಂದರ್ಭದಲ್ಲಿ ಏಷ್ಯನ್ ಗೇಮ್ಸ್‌ಗಾಗಿ ತೆರಳುತ್ತಿರುವ ಆಟಗಾರರಿಗೆ ಜರ್ಸಿ ನೀಡಲಾಯಿತು. ಅವರ ಕುಟುಂಬಗಳಿಗೆ ಹಾಕಿ ಇಂಡಿಯಾ ಸ್ಮರಣಿಕೆ ನೀಡಿ ಗೌರವಿಸಿತು. ಎರಡೂ ತಂಡಗಳು ಸೆಪ್ಟೆಂಬರ್ 19 ರಂದು ಹ್ಯಾಂಗ್ಜೋಗೆ ತೆರಳಲಿದ್ದು, ಅಲ್ಲಿಯವರೆಗೂ ಬೆಂಗಳೂರಿನ ಎಸ್ಎಐನಲ್ಲಿ (ಸ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ) ತರಬೇತಿ ಮುಂದುವರೆಸಲಿವೆ. ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೂ ಏಷ್ಯನ್ ಗೇಮ್ಸ್ ಪಂದ್ಯಾವಳಿ ನಡೆಯಲಿದೆ.
ಪುರುಷರ ಹಾಕಿ ತಂಡ: ಪಿ.ಆರ್.ಶ್ರೀಜೇಶ್, ಕ್ರಿಶನ್ ಪಾಠಕ್, ವರುಣ್ ಕುಮಾರ್, ಅಮಿತ್ ರೋಹಿದಾಸ್, ಜರ್ಮನ್‌ಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಸಂಜಯ್, ಸುಮಿತ್, ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್ (ಉಪನಾಯಕ), ಮನ್‌ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಶಂಶೇರ್ ಸಿಂಗ್, ಅಭಿಷೇಕ್, ಗುರ್ಜಂತ್ ಸಿಂಗ್, ಮನದೀಪ್ ಸಿಂಗ್, ಸುಖಜೀತ್ ಸಿಂಗ್ ಹಾಗೂ ಲಲಿತ್ ಕುಮಾರ್ ಉಪಾಧ್ಯಾಯ.
ಮಹಿಳಾ ಹಾಕಿ ತಂಡ: ಸವಿತಾ (ನಾಯಕಿ), ಬಿಚು ದೇವಿ ಖರಿಬಮ್, ದೀಪಿಕಾ, ಲಾಲ್ರೆಮ್ಸಿಯಾಮಿ, ಮೋನಿಕಾ, ನವನೀತ್ ಕೌರ್, ನೇಹಾ, ನಿಶಾ, ಸೋನಿಕಾ, ಉದಿತಾ, ಇಶಿಕಾ ಚೌಧರಿ, ದೀಪ್ ಗ್ರೇಸ್ ಎಕ್ಕಾ (ಉಪನಾಯಕಿ), ವಂದನಾ ಕಟಾರಿಯಾ, ಸಂಗೀತಾ ಕುಮಾರಿ, ವೈಷ್ಣವಿ ವಿಠಲ್ ಫಾಲ್ಕೆ, ಸುಶಿಲಾ ಚಾನು, ನಿಕ್ಕಿ ಪ್ರಧಾನ್, ಸಲೀಮಾ ಟೆಟೆ.