ಬೆಂಗಳೂರು: ಕುಟುಂಬಸ್ಥರು ಇಲ್ಲದೇ ಕೋವಿಡ್ನಿಂದ ಮೃತಪಟ್ಟವರ ಅದೆ್ಟೋ ಅಂತ್ಯ ಸಂಸ್ಕಾರಗಳು ನಡೆದಿವೆ. ಪೋಷಕರು ಮತ್ತು ಸಂಬಂಧಿಗಳು ಇದನ್ನೇ ನೆನೆದು ದುಃಖಕ್ಕೆ ಗುರಿಯಾಗುತ್ತಾರೆ. ಆದ್ರೆ ಕೆಲ ಮಾನವತಾವಾದಿಗಳು ಕೋವಿಡ್ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಲೈವ್ ಸ್ಟ್ರೀಮ್ ಮೂಲಕ ಆಯಾ ಕುಟುಂಸ್ಥರಿಗೆ ತೋರಿಸುತ್ತಿದ್ದಾರೆ.
ಕೋವಿಡ್ ಮಹಾಮಾರಿ ತೀರಾ ಹತ್ತಿರದ ಬಂಧುಗಳು, ರಕ್ತಸಂಬಂಧಿಗಳನ್ನು ದೂರ ಮಾಡಿ ಒಂಟಿ ಮಾಡಿಸುತ್ತದೆ. ಅಷ್ಟೇ ಅಲ್ಲ ಅಂತ್ಯ ಸಂಸ್ಕಾರದಲ್ಲೂ ಭಾಗಿಯಾಗದಂತೆ ಹಾಗೂ ಕೊನೆಯ ಬಾರಿ ಮುಖ ನೋಡದ ಹಾಗೆಯೂ ಈ ಕೊರೊನಾ ಮಾಡಿದೆ. ಹೀಗಾಗಿ ಕಡೆಯ ಬಾರಿಯ ಅಂತ್ಯ ಸಂಸ್ಕಾರವನ್ನಾದರೂ ನೋಡುವ ಅವಕಾಶವನ್ನು ತಂತ್ರಜ್ಞಾನದ ಮೂಲಕ ಸಾಧ್ಯ ಮಾಡಲಾಗ್ತಿದೆ.
37 ವರ್ಷದ ವ್ಯಕ್ತಿಯೊಬ್ಬರು ಕೋವಿಡ್ನಿಂದ ಚೇತರಿಸಿಕೊಳ್ಳದೆ ಮೃತಪಟ್ಟಿದ್ದರು. ಇವರನ್ನು ಇಂಡಿಯನ್ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಅವರ ಜೊತೆಗಿದ್ದ ಗೆಳೆಯರು ಅಂತ್ಯ ಸಂಸ್ಕಾರವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಕ್ವಾರಂಟೈನ್ನಲ್ಲಿದ್ದ ಅವರ ಕುಟುಂಸ್ಥರಿಗೆ ಹಾಗೂ ಮಲೇಶಿಯಾದಲ್ಲಿದ್ದ ಸ್ನೇಹಿತರಿಗೆ ಫೇಸ್ಬುಕ್ ಲೈವ್ ಮೂಲಕ ತೋರಿಸಿದರು. ಈ ರೀತಿ ಅನೇಕ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ಅಂತ್ಯ ಸಂಸ್ಕಾರದಲ್ಲೂ ಭಾಗಿಯಾಗಲಾಗದ ಸ್ಥಿತಿ ಬಂದಾಗ ಇದೇ ದಾರಿ ಅನುಸರಿಸುತ್ತಿದ್ದಾರೆ.
ಕಮ್ಮನಹಳ್ಳಿ ಸ್ಟುಡಿಯೋದ ವೃತ್ತಿಪರ ಕ್ಯಾಮರಾ ಮೆನ್ಗಳಿಗೆ ಅಂತ್ಯ ಸಂಸ್ಕಾರದ ಲೈವ್ ಸ್ಟ್ರೀಮ್ ಮಾಡಲು ಬೇಡಿಕೆ ಬರುತ್ತಿದೆ. ಬೇಡಿಕೆ ಹಿನ್ನೆಲೆ ಪಿಪಿಇ ಕಿಟ್ ಧರಿಸಿ ಸಿಬ್ಬಂದಿ ಸ್ಮಶಾನಕ್ಕೆ ಹೋಗಿ ಅಂತ್ಯ ಸಂಸ್ಕಾರವನ್ನು ಲೈವ್ ಮೂಲಕ ಆಯಾ ಕುಟುಂಬಸ್ಥರಿಗೆ ತೋರಿಸಲಾಗುತ್ತಿದೆ ಎಂದು ಸ್ಟುಡಿಯೋ ಮಾಲೀಕರು ತಿಳಿಸಿದ್ದಾರೆ.
ಕೆಲವೆಡೆ ಆಂಬ್ಯುಲೆನ್ಸ್ ಸಿಬ್ಬಂದಿ, ಅಂತ್ಯ ಸಂಸ್ಕಾರ ನಡೆಸುತ್ತಿರುವ ಸ್ವಯಂಸೇವಕರ ತಂಡದವರೇ ಲೈವ್ ಸ್ಟ್ರೀಮ್ ಮೂಲಕ ಸಂಬಂಧಿಕರಿಗೆ ತೋರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ. ಇದರಿಂದ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿಲ್ಲ ಎಂಬ ಕುಟುಂಬಸ್ಥರ ಕೊರಗು ನೀಗಿಸಿದಂತಾಗುತ್ತದೆ.