ಬೆಂಗಳೂರು : ಕೊರೊನಾ ವಾರಿಯರ್ಸ್‌ಗಳಾದ ಮೂವರು ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ. ಅವರ ಕುಟುಂಬಸ್ಥರಿಗೆ ಸರ್ಕಾರ ನಿಗದಿಪಡಿಸಿದ ಹಾಗೆ ಪರಿಹಾರ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಕೊರೊನಾ ಸೋಂಕಿತರ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಸೋಮವಾರ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಲಾಯಿತು. ಈ ವೇಳೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು, ಪ್ರಾಣವನ್ನು ಪಣಕ್ಕಿಟ್ಟು ಪೊಲೀಸರು ಕೊರೊನಾ ತಡೆಗಟ್ಟಲು ಶ್ರಮವಹಿಸಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ನಿರ್ಧರಿಸಿದಂತೆ ನಾಳೆಯಿಂದ ಸಿಟಿ ಮಾರ್ಕೆಟ್, ಕಲಾಸಿಪಾಳ್ಯ, ವಿವಿಪುರ ವಾರ್ಡ್ ಸೇರಿ ಸೀಲ್ಡೌನ್ ಮಾಡಲು ಸಿದ್ಧತೆ ನಡೆಸಲಾಗಿದೆ. ಸೀಲ್ಡೌನ್ ನಂತರ ಯಾರು ಹೊರಗಡೆಯಿಂದ ಬರುವಂತಿಲ್ಲ. ಒಳಗಡೆಯಿಂದ ಯಾರು ಹೊರಗಡೆ ಹೋಗುವಂತಿಲ್ಲ. ಅವಶ್ಯಕ ವಸ್ತುಗಳನ್ನು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಒದಗಿಸಿ ಕೊಡುತ್ತದೆ. ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ 55 ವರ್ಷ ಮೇಲ್ಪಟ್ಟ ಪೊಲೀಸರಿಗೆ ಮನೆಯಿಂದ ಕೆಲಸ ಮಾಡಲು ತಿಳಿಸಲಾಗಿದೆ. ಊರಿಗೆ ಹೋಗಿ ಬರುವ ಪೊಲೀಸರು ನೇರವಾಗಿ ಕರ್ತವ್ಯಕ್ಕೆ ಬರುವಂತಿಲ್ಲ. 15 ದಿನ ಹೋಮ್ ಕ್ವಾರಂಟೈನ್ ಇದ್ದು ನಂತರ ಕರ್ತವ್ಯಕ್ಕೆ ಬರಬೇಕು.
ನಗರದಲ್ಲಿ 74 ಪೊಲೀಸರು ಸೋಂಕು ಪೀಡಿತರಾಗಿದ್ದಾರೆ. ಮೂವರು ಮೃತಪಟ್ಟಿದ್ದಾರೆ. ಹಾಗೆ ಮೂರು ಪೊಲೀಸ್ ಠಾಣೆಗಳಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗಿದೆ. ಮೂರು ಪೊಲೀಸ್ ಠಾಣೆ ಸದ್ಯಕ್ಕೆ ಬಂದ್ ಮಾಡಿ, ಬೇರೆ ಕಡೆ ತೆರೆಯಲಾಗುವುದು. ಈಗಾಗಲೇ ಈ ಕುರಿತು ವೈರ್‌ಲೆಸ್‌ನಲ್ಲಿ ಪೊಲೀಸರಿಗೆ ಹಲವು ಸೂಚನೆ ನೀಡಲಾಗಿದೆ ಎಂದರು.