ಬೆಂಗಳೂರು: ಕೊರೊನಾ ವೈರಸ್ ಹರಡುತ್ತಿರುವ ಮಧ್ಯೆ ಇತ್ತೀಚಿನ ದಿನಗಳಲ್ಲಿ ಕೊರೊನಾ ಹೆಸರಿನಲ್ಲಿ ಬಹಳಷ್ಟು ತಪ್ಪು ಸಂದೇಶಗಳು ರವಾನೆಯಾಗುತ್ತಿದೆ. ಅಂತಹ ತಪ್ಪು ಸಂದೇಶ ಮತ್ತು ಫೇಕ್ ವಿಡಿಯೋ, ಮೆಸೇಜ್ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ಇಂತಹ ಕೃತ್ಯಗಳನ್ನ ಮಾಡುವವರ ಮೇಲೆ ಎಚ್ಚೆತ್ತು, ಮುಲಾಜಿಲ್ಲದೇ ಕ್ರಿಮಿನಲ್ ಕೇಸ್ ಹಾಕಿ ಎಂದು ಸಿಸಿಬಿ ಹಾಗೂ ಸೈಬರ್ ಪೊಲೀಸರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಂದೇಶ ರವಾನೆ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇನ್ಮುಂದೆ ಏನೇ ಪೊಸ್ಟ್ ಹಾಕಿದರೂ ಅದರ ಬಗ್ಗೆ ನಿಗಾ ಇಡಿ. ಯಾರಾದರೂ ತಪ್ಪು ಸಂದೇಶ ರವಾನೆ ಮಾಡುವಂತಹ ಮೆಸೇಜ್ ಮಾಡಿದರೆ ತಕ್ಷಣ ಕ್ರಿಮಿನಲ್ ಕೇಸ್ ಹಾಕಿ ಎಂದು ಸೂಚನೆ ನೀಡಿದ್ದಾರೆ.
ಸದ್ಯ ಕೊರೊನಾ ಹಿನ್ನೆಲೆ ಸಾರ್ವಜನಿಕರು ಸರ್ಕಾರದ ಜೊತೆ ಕೈ ಜೋಡಿಸಿ ಕೆಲಸ ಮಾಡುವ ಅನಿವಾರ್ಯತೆ ಇದೆ. ಆದರೆ, ಇದರ ಮಧ್ಯೆ ತಪ್ಪು ಸಂದೇಶ ರವಾನೆ ಮಾಡುವ ಕಿಡಿಗೇಡಿಗಳು, ಜನರನ್ನ ಪ್ಯಾನಿಕ್ ಮಾಡೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಇತ್ತೀಚೆಗೆ ಕೋವಿಡ್ ಸೆಂಟರ್ ಆಗಿ ಮಾರ್ಪಟ್ಟಿರುವ ವಿಕ್ಟೋರಿಯಾ ಆಸ್ಪತ್ರೆಯ ವಿಡಿಯೋ ಒಂದನ್ನ ವೈರಲ್ ಮಾಡಲಾಗಿತ್ತು. ಆರೋಪಿಯನ್ನ ಬಂಧಿಸಿದ ಬಳಿಕ ಆಯುಕ್ತರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.