ಬೆಂಗಳೂರು : 'ವಿದ್ಯೆ ಸಾಧಕನ ಸ್ವತ್ತೇ ಹೊರತು, ಸೋಮಾರಿಯ ಸ್ವತ್ತಲ್ಲ' ಎಂಬ ಮಾತೊಂದಿದೆ. ಆದ್ರೆ, ಇದಕ್ಕೆ ವಿರುದ್ಧವಾಗಿ ನಗರದಲ್ಲಿನ ಗ್ಯಾಂಗ್‌ವೊಂದು ಹಣ ನೀಡಿದವರಿಗೆಲ್ಲ ಸರ್ಟಿಫಿಕೇಟ್ ನೀಡಿ ಖೋಟಾ ಪದವೀಧರರನ್ನ ಸೃಷ್ಟಿಸುತ್ತಿತ್ತು. ಸದ್ಯ ಈ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.
ಕೃಷ್ಣ ತನ್ಮಯ್, ಹೈದರ್ ಅಲಿ ಹಾಗೂ ರಾಕೇಶ್ ಎಂಬುವರು ಈ ನಕಲಿ ಮಾರ್ಕ್ಸ್ ಕಾರ್ಡ್ ಜಾಲದ ರೂವಾರಿಗಳಾಗಿದ್ದಾರೆ. ಸದ್ಯ ಆರೋಪಿಗಳನ್ನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ಅವರು ಮಾತನಾಡಿ, ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 'ಡ್ರೀಮ್ಸ್ ಎಜುಕೇಶನ್ ಸರ್ವೀಸಸ್' ಎಂಬ ಹೆಸರಿನ ಕಚೇರಿಯನ್ನು ಆರೋಪಿಗಳು ತೆರೆದಿದ್ದರು.
ಸಾಮಾಜಿಕ ಜಾಲತಾಣದಲ್ಲಿ ದೂರ ಶಿಕ್ಷಣದ ಬಗ್ಗೆ ಹುಡುಕುವವರ ಮಾಹಿತಿ ಕಲೆ ಹಾಕಿ ಅವರಿಗೆ ನಕಲಿ ಮಾರ್ಕ್ಸ್ ಕಾರ್ಡ್ ನೀಡುತ್ತಿದ್ದರು. ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್ಗೆ 20 ಸಾವಿರ, ಪಿಯುಸಿ ಮಾರ್ಕ್ಸ್ ಕಾರ್ಡ್ಗೆ 25 ಸಾವಿರ ಹಾಗೂ ಡಿಗ್ರಿ ಮಾರ್ಕ್ಸ್ ಕಾರ್ಡ್ಗೆ ₹40 ಸಾವಿರ ಚಾರ್ಜ್ ಮಾಡುತ್ತಿದ್ದರು.
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ ಸೇರಿ ರಾಷ್ಟ್ರದ 14 ಪ್ರಮುಖ ಯೂನಿವರ್ಸಿಟಿಗಳ ನಕಲಿ ಮಾರ್ಕ್ಸ್ ಕಾರ್ಡ್ ನೀಡುತ್ತಿದ್ದರು.
ಜತೆಗೆ ಎಂಟು ರಾಜ್ಯಗಳ ಎಸ್ಎಸ್ಎಲ್ಸಿ ಹಾಗೂ ಪಿಯು ಬೋರ್ಡ್ಗಳ ಮಾರ್ಕ್ಸ್ ಕಾರ್ಡ್ಗಳನ್ನ ನಕಲಿ ಮಾಡಿದ್ದರು. ಸದ್ಯ ಆರೋಪಿಗಳಿಂದ 700ಕ್ಕೂ ಹೆಚ್ಚು ನಕಲಿ ಮಾರ್ಕ್ಸ್ ಕಾರ್ಡ್ ವಶಪಡಿಸಿಕೊಂಡಿರುವ ಪೊಲೀಸರು, ಹೆಚ್ಚಿನ ತನಿಖೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಓದಿ: ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ: ತಪ್ಪಿಸಿಕೊಳ್ಳಲು ಯತ್ನಿಸಿದ ವ್ಯಕ್ತಿ ಅನುಮಾನಾಸ್ಪದ ಸಾವು!