ಬೆಂಗಳೂರು: ದೇಶಾದ್ಯಂತ ಹರಡುತ್ತಿರುವ ಕೋವಿಡ್ 19 ತಡೆಗಟ್ಟಲು ಎಫ್ಕೆಸಿಸಿಐ, ಕಾಸಿಯಾ ಹಾಗೂ ಪೀಣ್ಯ ಕೈಗಾರಿಕಾ ಸಂಘ ಇಂದು ಅಗತ್ಯ ಕಾರ್ಖಾನೆ ಮಾತ್ರ ಕಾರ್ಯನಿರ್ವಹಿಸಬೇಕು ಹಾಗೂ ಉಳಿದ ಎಲ್ಲ ನೌಕರರಿಗೆ ಪೂರ್ಣ ವೇತನ ನೀಡಬೇಕು ಎಂದು ಎಫ್ಕೆಸಿಸಿಐನಲ್ಲಿ ವಿವಿಧ ಸಂಘಗಳ ಅಧ್ಯಕ್ಷರು ಕೈಗಾರಿಕೆಗಳಿಗೆ ಮನವಿ ಮಾಡಿದರು.
ಕಾರ್ಮಿಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅತ್ಯಗತ್ಯ. ಅವರ ಮೇಲೆ ನಮ್ಮ ವಹಿವಾಟು ನಿಂತಿದೆ. ಸರ್ಕಾರ ಲಾಕ್ ಡೌನ್ ಬಗ್ಗೆ ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಬೆಂಬಲವಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದವರು ಸಾಧ್ಯವಿದ್ದರೆ ಕೆಲಸ ಮಾಡಬಹುದು, ಇಲ್ಲದಿದ್ದರೆ ಮಾಡದೇ ಇರಬಹುದು ಎಂದು ಎಫ್ಕೆಸಿಸಿಐ ಅಧ್ಯಕ್ಷ ಸಿ. ಆರ್ ಜನಾರ್ದನ್ ತಿಳಿಸಿದರು. ಅಷ್ಟೇ ಅಲ್ಲದೆ, ಇನ್ನು ಕನಿಷ್ಠ ಒಂದು ವಾರದ ಮಟ್ಟಿಗೆ ಗಾರ್ಮೆಂಟ್ಸ್ ಕ್ಲೋಸ್ ಮಾಡಲು ನೀಡಿದ್ದಾರೆ.
ಸರ್ಕಾರಗಳಿಂದ ಸಹಾಯದ ನಿರೀಕ್ಷೆ: ಈಗಾಗಲೇ ದೇಶದಲ್ಲಿ ಆರ್ಥಿಕ ಹಿಂಜರಿತ ಇದ್ದು ಇದರ ಮೇಲೆ ಕರೋನಾ ಎಫೆಕ್ಟ್ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ಕೈಗಾರಿಕಾ ಸಂಸ್ಥೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೈ ಹಿಡಿಯಬೇಕು. ಬ್ಯಾಂಕ್ ಸಾಲ ಪಾವತಿಯನ್ನು ಸಡಿಲಗೊಳಿಸಿ ಜೊತೆಗೆ ಕೇವಲ ಕನಿಷ್ಠ ವಿದ್ಯುತ್ ದರವನ್ನು ಪಡೆಯಬೇಕು ಎಂದು ಈ ಸಂದರ್ಭದಲ್ಲಿ ಸರ್ಕಾರಗಳಿಗೆ ಮನವಿ ಮಾಡಿದರು.