ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿರುವ ಕೈದಿಗಳ ಮನಪರಿವರ್ತನೆಗಾಗಿ ರಾಜ್ಯ ಕಾರಾಗೃಹ ಇಲಾಖೆ ವಿನೂತನ ಕೆಲಸಕ್ಕೆ ಕೈ ಹಾಕಿದೆ. ನಗರದ ಸೆಂಟ್ರಲ್ ಜೈಲಿನಲ್ಲಿ ಇದೇ ಮೊದಲ ಬಾರಿಗೆ ಕೈದಿಗಳಿಗಾಗಿ ಪ್ರತ್ಯೇಕ ಎಫ್ಎಂ ರೇಡಿಯೊ ಆರಂಭಿಸಲು ಸಿದ್ದತೆ ನಡೆದಿದೆ.
ಸೆಂಟ್ರಲ್ ಜೈಲಿನಲ್ಲಿ 1,400 ಸಜಾಬಂಧಿಗಳು ಹಾಗೂ 3,600 ವಿಚಾರಣಾಧೀನ ಕೈದಿಗಳು ಸೇರಿದಂತೆ ಒಟ್ಟು 5,000 ಕೈದಿಗಳಿದ್ದಾರೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿರುವ ಸಜಾಬಂಧಿಗಳ ಮನಪರಿವರ್ತನೆ ಭಾಗವಾಗಿ ಎಫ್ಎಂ ಆರಂಭಿಸಲಾಗುತ್ತಿದ್ದು, ಇನ್ನೂ 15 ದಿನಗಳಲ್ಲಿ ಪ್ರಾರಂಭವಾಗಲಿದೆ ಎಂದು ಜೈಲಾಧಿಕಾರಿಗಳು ಈಟಿವಿ ಭಾರತ್ ಗೆ ತಿಳಿಸಿದ್ದಾರೆ.
ಎಫ್ಎಂನಲ್ಲಿ ಏನೆಲ್ಲಾ ಬರುತ್ತೆ ?
ಜೈಲಿನಲ್ಲಿ ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಿರಂತರವಾಗಿ ಎಫ್ಎಂನಲ್ಲಿ ಕಾರ್ಯಕ್ರಮಗಳು ಬಿತ್ತರಗೊಳ್ಳಲಿವೆ. ಬೆಳಗ್ಗಿನ ವೇಳೆ ಮನಸ್ಸು ಉಲ್ಲಾಸದಿಂದರಲು ದೇವರ ಕೀರ್ತನೆ, ಭಜನೆ ಕಾರ್ಯಕ್ರಮಗಳು ಪ್ರಸಾರವಾಗಲಿವೆ. ಆಯಾ ದಿನಪತ್ರಿಕೆಗಳಲ್ಲಿ ಬಂದ ವಿಷಯಗಳು, ವಿಶ್ವದ ಆಗುಹೋಗುಗಳ ಬಗ್ಗೆ ಮಾಹಿತಿ, ಸಾಧಕರ ಪರಿಚಯ, ಜಯಂತಿ ಆಚರಣೆ, ಸಿನಿಮಾ ಸಂಗೀತದ ಜೊತೆಗೆ ಉತ್ತಮ ನಡವಳಿಕೆ ಕುರಿತು ಬೋಧನೆಗಳನ್ನು ಕೈದಿಗಳು ಆಲಿಸಬಹುದಾಗಿದೆ.
ಜೈಲಿನ ಕೊಠಡಿಯೊಂದರಲ್ಲಿ ಚಿಕ್ಕ ಪ್ರಮಾಣದಲ್ಲಿ ಸ್ಟುಡಿಯೋ ನಿರ್ಮಿಸಲಾಗುತ್ತಿದ್ದು, ಮೈಕ್, ಸ್ಪೀಕರ್‌ಗಳು ಸೇರಿದಂತೆ ಅಗತ್ಯವಿರುವ ಪರಿಕರಗಳನ್ನು ಖರೀದಿಸಲಾಗಿದೆ. ಜೈಲಿನಲ್ಲಿರುವ 16 ಬ್ಯಾರಕ್‌ಗಳಲ್ಲಿಯೂ ತಲಾ ಒಂದು ಸ್ಪೀಕರ್ ಅಳವಡಿಸಲಾಗುತ್ತಿದೆ. ಈ ಮೂಲಕ ಎಲ್ಲಾ ಕೈದಿಗಳು ಎಫ್ಎಂನಲ್ಲಿ ಬರುವ ಕಾರ್ಯಕ್ರಮಗಳು ಆಲಿಸಲಿದ್ದಾರೆ.