ಬೆಂಗಳೂರು : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ ಹಿಂದೆ ಐಸಿಸ್ ಚಿತಾವಣೆ ಇದೆ ಎಂದು ಬಿಜೆಪಿ ಶಾಸಕ ಸಿದ್ದು ಸವದಿ ಗಂಭೀರ ಆರೋಪ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಚಿತ್ರಹಿಂಸೆ ಮಾಡಿ ಕರೆಂಟ್ ಶಾಕ್ ಕೊಟ್ಟು ಸ್ವಾಮೀಜಿ ಅವರನ್ನು ಕೊಂದಿದ್ದಾರೆ. ಇದರ ಹಿಂದೆ ಉಗ್ರಗಾಮಿಗಳ ಕೈವಾಡ ಇದೆ. ಇನ್ನು, ಭಯಾನಕ ಘಟನೆ ಭವಿಷ್ಯದಲ್ಲಿ ಕಾಣುವ ಆತಂಕ ಇದೆ. ಘಟನೆ ಹಿಂದೆ ಐಸಿಸ್ ಉಗ್ರರ ಸಂಚು ಇದೆ ಎಂದು ಆರೋಪಿಸಿದರು.
ಸರ್ವ ಸಂಗ ತ್ಯಾಗ ಮಾಡಿದ ಜೈನ ಮುನಿಗಳ ಹತ್ಯೆಯ ಹಿಂದೆ ಪಿತೂರಿ ಇದೆ. ಜೈನ ಮುನಿಗಳ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು. ಸ್ವಾಮಿಗಳು ಆರ್ಥಿಕ ವ್ಯವಹಾರ ಮಾಡಿರುವ ಸಾಧ್ಯತೆ ಇಲ್ಲ. ಭಕ್ತರು ಆರ್ಥಿಕ ವ್ಯವಹಾರ ಮಾಡಿರಬಹುದು. ಸಂಸ್ಕಾರ ಕೊಡುವ ಮುನಿಗಳು ಆರ್ಥಿಕ ವ್ಯವಹಾರ ಮಾಡಲು ಸಾಧ್ಯವಿಲ್ಲ. ಸರ್ಕಾರ ವಿಷಯವನ್ನು ಮುಚ್ಚಿಡುವ ಯತ್ನ ಮಾಡುತ್ತಿದೆ. ಎಲ್ಲ ಮುನಿಗಳಿಗೆ ರಕ್ಷಣೆ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಸಿಬಿಐ ತನಿಖೆಗೆ ಆಗ್ರಹ : ಇದೇ ವೇಳೆ ಮಾತನಾಡಿದ ಬಿಜೆಪಿ ಶಾಸಕ ಅಭಯ್ ಪಾಟೀಲ್, ಜೈನ ಮುನಿಗಳ ಹತ್ಯೆ ಬಗ್ಗೆ ವರದಿ ಪಡೆದಿದ್ದೇನೆ. ಅವರ ಪೂರ್ವಾಶ್ರಮದ 40 ಎಕರೆ ಜಮೀನಿದೆ. ಎಲ್ಲಾ ತ್ಯಾಗ ಮಾಡಿದವರು ಬಡ್ಡಿಗೆ ದುಡ್ಡು ಬಿಟ್ಟಿದ್ದಾರೆ ಅನ್ನೋದು ಹಾಸ್ಯಾಸ್ಪದ. ನಾನು ಸ್ವತಃ ಚಿಕ್ಕೋಡಿಗೆ ಹೋಗಿದ್ದೆ. ಅಲ್ಲಿನ ಜನರಿಗೆ ಹೀಗೆ ಹೇಳಿಕೆ ಕೊಡಬೇಕು ಅಂತ ಒತ್ತಡ ಹಾಕಿದ್ದಾರೆ. ಇದೆಲ್ಲ ನೋಡಿದ್ರೆ ಪೊಲೀಸರು ಯಾರದ್ದೋ ಒತ್ತಡಕ್ಕೆ ಸಿಲುಕಿದ್ದಾರೆ. ಹಾಗಾಗಿ ಸಿಬಿಐ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಇಬ್ಬರು ಆರೋಪಿಗಳ ಹೆಸರನ್ನ ಹೇಳಲಿಲ್ಲ. ನಾರಾಯಣಪಾಳಿ ಒಬ್ಬರ ಹೆಸರನ್ನ ಮಾತ್ರ ಹೇಳಿದ್ದಾರೆ. ಸ್ವಾಮೀಜಿ ಹಣಕಾಸು ವ್ಯವಹಾರ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.
ಜೈನ ಮುನಿ ಹತ್ಯೆ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಹತ್ಯೆ ತನಿಖೆಯ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ಪೊಲೀಸರು ಏನು ಕಾನೂನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತಾರೆ. ಇಂತಹ ಘಟನೆ ನಡೆದಾಗ ಯಾರೂ ಕೂಡ ತಾರತಮ್ಯ ಮಾಡಲು ಹೋಗುವುದಿಲ್ಲ. ಪೊಲೀಸರು ಜೈನ ಮುನಿ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾದ ಕೂಡಲೇ ತನಿಖೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿದ್ದಕ್ಕೆ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇದನ್ನೂ ಓದಿ : ಜೈನ ಮುನಿಗಳ ಹತ್ಯೆ ಖಂಡಿಸಿ ಸಿಡಿದೆದ್ದ ಜೈನ ಸಮಾಜ.. ಬೆಳಗಾವಿಯಲ್ಲಿ ಹೆದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ