ಬೆಂಗಳೂರು: ಸಿಸಿಬಿ ಎಸಿಪಿ ಹೆಸರಿನಲ್ಲಿ ನಗರದ ಸ್ಪಾವೊಂದಕ್ಕೆ ಹೋಗಿ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡು ಸಾವಿರಾರು ರೂಪಾಯಿ ವಸೂಲಿ ಮಾಡಿದ್ದ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಆನಂದ್ ಪೀಣ್ಯ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಈತ ತಾನು ಸಿಸಿಬಿ ಪೊಲೀಸ್ ಎಂದು ಹೇಳಿ ಸ್ಪಾ ಅಂಡ್ ಸೆಲ್ಯೂನ್ನಲ್ಲಿ 20 ಸಾವಿರ ದೋಚಿದ್ದನು. ಒಂದಷ್ಟು ಕಡೆ ವಿಚಾರ ನಡೆಸಿದಾಗ ದುಡ್ಡು ತೆಗೆದುಕೊಂಡವನು ಯಾವ ಸಿಸಿಬಿ ಅಧಿಕಾರಿಯೂ ಅಲ್ಲ ಎಂದು ತಿಳಿದು ನಂತರ ಆರೋಪಿಯನ್ನು ಪತ್ತೆ ಹಚ್ಚಲು ಸ್ಪಾ ಮಾಲೀಕರಾದ ಸ್ಮಿತಾ ದೂರು ನೀಡಿದ್ದರು. ಈ ಹಿನ್ನಲೆ ಆನಂದ್ನನ್ನು ಬಂಧಿಸಲಾಗಿದೆ.
ಎಸಿಪಿ ರೀನಾ ಸುವರ್ಣ ಹೆಸರು ಹೇಳಿ ಸುಲಿಗೆ: ಸದ್ಯ ಸಿಸಿಬಿ ಎಸಿಪಿಯಾಗಿರುವ ರೀನಾ ಸುವರ್ಣ ಅವರ ಆಪ್ತ, ನಾನು ಸಿಸಿಬಿ ಸಿಬ್ಬಂದಿ, ರೀನಾ ಮೇಡಂ ಕಳುಹಿಸಿದ್ದಾರೆ. ಇನ್ಮೆಲೇ ತಿಂಗಳಾಗುತ್ತಿದ್ದಂತೆ 20 ಸಾವಿರ ಬರಬೇಕು ಎಂದು ಧಮ್ಕಿ ಹಾಕಿದ್ದನು. ಇದಕ್ಕೆ ಹೆದರಿದ ಸಾರಾ ಸ್ಪಾ ಅಂಡ್ ಸಲೂನ್ ಮ್ಯಾನೇಜರ್ ಕುಂದನ್ ಆತನಿಗೆ 20 ಸಾವಿರ ನೀಡಿದ್ದನು. ಪ್ರತೀ ತಿಂಗಳು ಮಾಮೂಲಿ ಹಣ ಕೊಡದಿದ್ದರೆ ದಾಳಿ ಮಾಡಿಸುವುದಾಗಿ ಬೆದರಿಕೆ ಹಾಕಿದ್ದನು.
ಕೆಲ ದಿನಗಳ ಬಳಿಕ ಅನುಮಾನಗೊಂಡ ಸ್ಪಾ ಮಾಲೀಕರಾದ ಸ್ಮಿತಾ ಸಿಸಿಟಿವಿ ಸಮೇತ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡಾಗ ಸಿಸಿಬಿ ಹೆಸರಿನಲ್ಲಿ ಸುಲಿಗೆ ಮಾಡಿದ್ದು, ಬೇರ್ಯಾರು ಅಲ್ಲ ಈ ಹಿಂದೆ ಕೂಡ ಇದೇ ರೀತಿಯ ಕೃತ್ಯ ನಡೆಸಿ ಸಿಕ್ಕಿಹಾಕಿಕೊಂಡಿದ್ದ ಆನಂದ್ ಎಂಬುದು ಗೊತ್ತಾಗಿದೆ.
ಈತ ಹಿಂದೆ ಪೀಣ್ಯಾ ಅಗ್ನಿಶಾಮಕ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದನು. ಇದೇ ರೀತಿಯ ಕೃತ್ಯದ ಬಗ್ಗೆ ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ಬಂದ ಹಿನ್ನಲೆ ಆನಂದ್ನನ್ನು ಸಸ್ಪೆಂಡ್ ಮಾಡಿದ್ದರು. ನಂತರ ನೇರವಾಗಿ ಅಥಣಿ ಅಗ್ನಿಶಾಮಕ ದಳಕ್ಕೆ ಪೋಸ್ಟಿಂಗ್ ಆಗಿತ್ತು. ನಾಲ್ಕು ತಿಂಗಳ ಹಿಂದೆ ಆಸ್ಪತ್ರೆಯೊಂದಕ್ಕೆ ತೆರಳಿ ಅಲ್ಲಿಯೂ ಕೂಡ ರೋಲ್ ಕಾಲ್ ಮಾಡಿದ್ದ ಎಂಬ ವಿಚಾರಗಳು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಅದೂ ಅಲ್ಲದೇ ಸರ್ಕಾರಿ ಸಂಬಳ ಪಡೆಯುತ್ತಿದ್ದರೂ ಹಣದಾಸೆ ಬಿಟ್ಟಿಲ್ಲ. ಸದ್ಯ ಆರೋಪಿಯ ವಿಚಾರಣೆ ತೀವ್ರವಾಗಿ ಮುಂದುವರೆದಿದೆ.
ಇದನ್ನೂ ಓದಿ: ಅರಣ್ಯ ಇಲಾಖೆ ಹಗರಣ: ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕುಮಾರ್ ಬಂಧನ