ಬೆಂಗಳೂರು: ಪಕ್ಷದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಕುರಿತು ನಾವು ಚಿಂತಿಸಬೇಕು. ಮಹಿಳಾ ಸಂಘಟನೆ- ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ನಮ್ಮ ಪಕ್ಷದ ವಿಚಾರಧಾರೆ, ಕಾರ್ಯಕ್ರಮಗಳನ್ನು ತಿಳಿಸಿ ಅವರನ್ನು ಮೋರ್ಚಾಕ್ಕೆ ಜೋಡಿಸುವ ಕುರಿತು ಚಿಂತನೆ ನಡೆಸಿ ಕಾರ್ಯ ಪ್ರವೃತ್ತರಾಗಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಪ್ರೀತ್ ಕೌರ್ ಕರೆ ನೀಡಿದ್ದಾರೆ.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಆರಂಭದಲ್ಲಿ ಕನ್ನಡದಲ್ಲೇ ಮಾತನಾಡಿದರು. ನಂತರ ಕೋವಿಡ್ ಸಂದರ್ಭದಲ್ಲಿ ತಂದೆ, ತಾಯಿ, ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕರ್ತವ್ಯದ ಕರೆಗೆ ಓಗೊಟ್ಟು ವಾರಿಯರ್ಗಳಂತೆ ಕಾರ್ಯ ನಿರ್ವಹಿಸಿದ ವೈದ್ಯರು, ಶುಶ್ರೂಷಾ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಯನ್ನು ಗೌರವಿಸಬೇಕು. ಕೋವಿಡ್ ಸಂಕಷ್ಟದ ನಡುವೆಯೂ ಕರ್ತವ್ಯ ನಿರ್ವಹಿಸಿದ ಸಫಾಯಿ ಕರ್ಮಚಾರಿಗಳ ಕಾರ್ಯ ಶ್ಲಾಘನೀಯ. ರಕ್ಷಾ ಬಂಧನ ಸಪ್ತಾಹದಲ್ಲಿ ಸಫಾಯಿ ಕರ್ಮಚಾರಿಗಳನ್ನು ಪರಿಚಯಿಸಿ ಸನ್ಮಾನ ಮಾಡಿ. ಅವುಗಳ ವಿಡಿಯೋ ಮಾಡಿ ಅದನ್ನು ಜನರಿಗೆ ತಲುಪಿಸಿ ಎಂದು ತಿಳಿಸಿದರು.
ಸ್ಮಾರ್ಟ್ ಫೋನ್‍ಗಳನ್ನು ಬಳಸಿ ಜನರನ್ನು ತಲುಪಲು ಸಾಧ್ಯ: ಪ್ರಧಾನಿಯವರ ಮನ್ ಕೀ ಬಾತ್ ಕೇಳಿ ಮತ್ತು ಕೇಳಿಸಿ. ಪಕ್ಷದ ನಾಯಕರ ಮಾತುಗಳನ್ನು ಆಲಿಸಿ ಅದರಲ್ಲಿರುವ ಚಿಂತನೆಗಳನ್ನು ಮನನ ಮಾಡಿಕೊಳ್ಳಿ. ಈ ಮೂಲಕ ನಾವು ಪಕ್ಷದ ವಾರಿಯರ್ಗಳಂತೆ ಕಾರ್ಯ ನಿರ್ವಹಿಸಬೇಕಿದೆ. ಫೇಸ್‍ಬುಕ್, ಟ್ವಿಟರ್ನಂಥಹ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರಿ. ಕೋವಿಡ್ ಸಂದರ್ಭದಲ್ಲಿ ಸ್ಮಾರ್ಟ್ ಫೋನ್‍ಗಳನ್ನು ಬಳಸಿ ಜನರನ್ನು ತಲುಪಲು ಸಾಧ್ಯವಿದೆ ಎಂದು ಅವರು ಸಲಹೆ ನೀಡಿದರು.
ಸಾಧನೆಯನ್ನು ಜನರಿಗೆ ತಿಳಿಸುವ ಕಾರ್ಯ ಆಗಬೇಕು: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಮನೆ ನಿರ್ಮಾಣ ಕಾರ್ಯದಲ್ಲಿ ಅತ್ಯುತ್ತಮವಾಗಿ ಕೆಲಸ ನಡೆದಿದೆ. ಕಾಂಗ್ರೆಸ್ ಪಕ್ಷದ ಸರ್ಕಾರವಿದ್ದಾಗ ಹಲವು ಜಿಲ್ಲೆಗಳಿಗೆ ಕನಿಷ್ಠ ಸಂಖ್ಯೆಯ ಮನೆಗಳನ್ನು ಮಂಜೂರು ಮಾಡಲಾಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರವು ಪ್ರತಿಯೊಬ್ಬರಿಗೂ ಸೂರು ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಇದರ ಪ್ರಯೋಜನ ನೈಜ ಫಲಾನುಭವಿಗೆ ಸಿಗುವಂತೆ ನಾವು ನೋಡಿಕೊಳ್ಳಬೇಕಿದೆ. ಅಲ್ಲದೆ, ಬಿಜೆಪಿ ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸುವ ಕಾರ್ಯ ಆಗಬೇಕು ಎಂದು ಆಶಿಸಿದರು.
ಗುರುತಿಸಿ, ಗೌರವಿಸುವ ಕಾರ್ಯವೂ ಆಗಬೇಕಿದೆ: ವೋಕಲ್ ಫಾರ್ ಲೋಕಲ್ ಬಗ್ಗೆ ಜನರಿಗೆ ಪ್ರೇರಣೆ ನೀಡಬೇಕು. ಉತ್ತಮ ಸ್ವದೇಶಿ ವಸ್ತುಗಳನ್ನು ರಫ್ತು ಮಾಡುವ ಕುರಿತು ಜಾಗೃತಿ ಮೂಡಬೇಕಿದೆ. ಮಹಿಳಾ ಮೋರ್ಚಾವು ದೇಶದ ಅತಿ ದೊಡ್ಡ ರಾಜಕೀಯ ಪಕ್ಷದ ಮಹತ್ವದ ಭಾಗವಾಗಿದೆ. ಆದರೆ, ಪಕ್ಷದ ಬೆಳವಣಿಗೆಯಲ್ಲಿ ಹಿಂದೆ ಕಾರ್ಯ ನಿರ್ವಹಿಸಿದ್ದ ಜನಸಂಘ- ಬಿಜೆಪಿಯ ಹಿಂದಿನ ಕಾರ್ಯಕರ್ತೆಯರ ತ್ಯಾಗವೂ ಮಹತ್ವದ್ದು. ಅಂಥ ಕಾರ್ಯಕರ್ತೆಯರನ್ನು ಗುರುತಿಸಿ ಗೌರವಿಸುವ ಕಾರ್ಯವೂ ಆಗಬೇಕಿದೆ ಎಂದರು.
ಜಿಲ್ಲೆಯ ಮಹಿಳಾ ಮೋರ್ಚಾದ ಅಧ್ಯಕ್ಷರು ಇನ್ನೊಂದು ಜಿಲ್ಲೆಯ ಉತ್ತಮ ಕಾರ್ಯಗಳ ಕುರಿತು ಗಮನ ಹರಿಸಬೇಕು. ಅವುಗಳ ಕಾರ್ಯ ನಿರ್ವಹಣೆಯನ್ನು ಗಮನಿಸಿ ಅದನ್ನು ತಮ್ಮ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತರುವ ಕುರಿತು ಯೋಜನೆ ರೂಪಿಸಬೇಕು ಎಂದು ತಿಳಿಸಿದರು.
ಸ್ಪರ್ಧೆ ಮತ್ತು ಅಸೂಯೆ ಬೇಡ: ಮಹಿಳಾ ಮೋರ್ಚಾದ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ ಮಾತನಾಡಿ, ಮಹಿಳಾ ಮೋರ್ಚಾದ ಸದಸ್ಯರು ಮತ್ತು ಪದಾಧಿಕಾರಿಗಳು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕು. ಸ್ಪರ್ಧೆ ಮತ್ತು ಅಸೂಯೆ ಬೇಡ. ಕೇಂದ್ರ ಸರ್ಕಾರ ಜಾರಿಗೊಳಿಸಿದ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ, ಜನ್‍ಧನ್ ಯೋಜನೆ, ಮಾತೃವಂದನಾ ಯೋಜನೆ ಮೊದಲಾದವುಗಳ ಕುರಿತು ಜಾಗೃತಿ ಮೂಡಿಸಲು ತಿಳಿಸಿದ್ದಾರೆ ಎಂದರು.
ನಮ್ಮ ಹೆಮ್ಮೆಯ ಪ್ರಧಾನಿಗಳು ತ್ರಿವಳಿ ತಲಾಖ್ ರದ್ದತಿ ಮಾಡಿದ್ದರ ಕುರಿತು ಮುಸ್ಲಿಂ ಹೆಣ್ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ಪಕ್ಷದ ಸಂಘಟನೆಯಲ್ಲಿ ಶೇಕಡಾ 33ರಷ್ಟು ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ತಿಳಿಸಿದರು.
ತಾಂಡಾ ಮತ್ತಿತರ ಕಡೆ ಅಪೌಷ್ಟಿಕತೆಯಿಂದ ಬಳಲುವ ಮಹಿಳೆಯರಿಗೆ ಪೋಷಣಾ ಅಭಿಯಾನದ ಮೂಲಕ ನೆರವಾಗಬೇಕು. ಮುಖ್ಯಮಂತ್ರಿಗಳು ಘೋಷಿಸಿದ ಪ್ಯಾಕೇಜ್ ಹಣ ಸಮರ್ಪಕ ಫಲಾನುಭವಿಗೆ ತಲುಪಲು ಅವರಿಗೆ ಫಾರ್ಮ್ ತುಂಬಿಸಲು ನೆರವಾಗಬೇಕು. ಈ ಕುರಿತು ವರದಿ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ತುಕ್ಕು ಹಿಡಿಯುತ್ತಿವೆ 38 ಸಾವಿರ ವಾಹನಗಳು!