ಬೆಂಗಳೂರು: ಭತ್ತ ಹಾಗೂ ಗೋಧಿ ಬೆಳೆಗೆ ಹೆಚ್ಚು ಪ್ರಮಾಣ ನೀರು ಬೇಕಾಗುತ್ತೆ. ಹಸಿರು ಕ್ರಾಂತಿಯ ಸಮಯದಲ್ಲಿ ಈ ಬೆಳೆಗಳನ್ನು ಹೆಚ್ಚು ಬೆಳೆಯಲಾಯ್ತು. ಈ ಬೆಳೆಗಳಿಗೆ ವಿದೇಶಗಳು ಬಳಸುವುದಕ್ಕಿಂತ ನಾವು ದುಪ್ಪಟ್ಟು ನೀರು ಬಳಕೆ ಮಾಡುತ್ತಿದ್ದೇವೆ. ಹೀಗಾಗಿ ಅಕ್ಕಿಯನ್ನು ರಫ್ತು ಮಾಡುತ್ತಿದ್ದೇವೆ ಅಂದರೆ ಪರೋಕ್ಷವಾಗಿ ನೀರನ್ನು ರಫ್ತು ಮಾಡುತ್ತಿದ್ದೇವೆ ಎಂದರ್ಥ ಎಂದು ಕೇಂದ್ರ ಅಂತರ್ಜಲ ಮಂಡಳಿಯ ಕೆ.ಸಿ ನಾಯಕ್ ಹೇಳಿದ್ದಾರೆ.
ಕೇಂದ್ರದ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಇಲಾಖೆ ಕೇಂದ್ರೀಯ ಅಂತರ್ಜಲ ಮಂಡಳಿ ರೈತರಿಗಾಗಿ ಹಮ್ಮಿಕೊಂಡಿದ್ದ ಅಂತರ್ಜಲ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇದು 5ನೇ ಕಾರ್ಯಾಗಾರ. ಈಗಾಗಲೇ ಲಖನೌ, ಹೈದರಾಬಾದ್‌ಗಳಲ್ಲಿ ನಡೆದಿದೆ. ರೈತರಿಗೆ ಅಂತರ್ಜಲದ ಬಗ್ಗೆ ಮಾಹಿತಿ ನೀಡಲು, ಹೆಚ್ಚೆಚ್ಚು ನೀರಿನ ಬಳಕೆಗೆ ನಿಯಂತ್ರಣ ಹಾಕುವ ಬಗ್ಗೆ ಮಾಹಿತಿ ನೀಡಬೇಕಿದೆ ಎಂದರು.
ನೀರಿನ ಸಂರಕ್ಷಣೆ, ಕೃಷಿ ವಿಧಾನಗಳು ಹಾಗೂ ಆಹಾರ ಕ್ರಮದಲ್ಲೂ ಬದಲಾವಣೆ ಆಗಿದೆ. ಭತ್ತ, ಗೋಧಿ ನಮ್ಮ ಮೂಲ ಆಹಾರ ಅಲ್ಲ. ಹಸಿರು ಕ್ರಾಂತಿಗಾಗಿ ಇವುಗಳನ್ನು ಆರಂಭಿಸಲಾಯ್ತು. ಆದರೆ, ಈ ಬೆಳೆಗಳಿಗೆ ಹೆಚ್ಚು ನೀರಿನ ಅಗತ್ಯವಿದೆ. ಒಂದು ಕೆಜಿ ಅಕ್ಕಿ ಬೆಳೆಯಲು 3 ಸಾವಿರ ಅಥವಾ 2 ಸಾವಿರ ಲೀಟರ್ ನೀರು ಬಳಸಲಾಗುತ್ತಿದೆ. ಭತ್ತ, ಕಬ್ಬು ಬೆಳೆಗಳಿಗೆ ಹೆಚ್ಚು ಅಂತರ್ಜಲದ ನೀರು ಬಳಕೆ ಮಾಡಿಕೊಳ್ಳುವುದರಿಂದ ಕೃಷಿ ವಿಧಾನದಲ್ಲಿ ಬದಲಾವಣೆ ತರಬೇಕಿದೆ ಎಂದರು.
ಸಂಸದ ಪಿ ಸಿ ಮೋಹನ್ ಮಾತನಾಡಿ, ಹದಿನಾಲ್ಕು ಜಿಲ್ಲೆಗಳಲ್ಲಿ ಅಂತರ್ಜಲದ ಮರುಪೂರಣ ಮಾಡಲು ಕೇಂದ್ರ ಸರ್ಕಾರ ನೀಡುವ 3000 ಕೋಟಿ ರೂ. ಅನುದಾನ ಹಾಗೂ ಸಾಲದ ರೂಪದಲ್ಲಿ ಧನಸಹಾಯ ಮಾಡಲಿದೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿಯೂ ಈ ಅನುದಾನದಿಂದ ಕೆಲಸ ನಡೆಯುತ್ತಿದೆ ಎಂದರು.