ಬೆಂಗಳೂರು: ನ್ಯಾಯಾಧೀಶರು ಸೇರಿ 3 ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ಕೊರ್ಟ್ ಹಾಗೂ ನಗರ ಆಯುಕ್ತರ ಕಚೇರಿ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಸದ್ಯ ಬೆದರಿಕೆ ಪತ್ರದ ಜಾಡು ಹಿಡಿದು ಒಂದು ತಂಡ ತುಮಕೂರಿಗೆ ತೆರಳಿದೆ. ಸಂಜೆ 5 ಗಂಟೆಗೆ ಆರಂಭವಾದ ಕಾರ್ಯಾಚರಣೆ ರಾತ್ರಿ 12 ಗಂಟೆಗೆ ಮುಕ್ತಾಯವಾಯಿತು. ಕಾರ್ಯಾಚರಣೆ ವೇಳೆ ಬಾಂಬ್ ಸ್ಕ್ವಾಡ್, ಶ್ವಾನದಳ ಶೋಧ ಕಾರ್ಯ ನಡೆಸಿದವು.
ಬೆದರಿಕೆ ಪತ್ರದ ಜತೆ ಜೀವಂತ ಡಿಟೋನೇಟರ್ ಪೋಸ್ಟ್ ಮೂಲಕ ಬಂದಿದ್ದು, ತುಮಕೂರಿನಿಂದ ಪೋಸ್ಟ್ ಆಗಿರುವ ವಿಚಾರ ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಹೀಗಾಗಿ ಸದ್ಯ ಸಿಸಿಬಿ ಡಿಸಿಪಿ ರವಿ ಕುಮಾರ್ ನೇತೃತ್ವದ ತಂಡ ರಾತ್ರಿ ಕಾರ್ಯಾಚರಣೆ ನಡೆಸಿ ಒಂದು ತಂಡ ತುಮಕೂರುನಲ್ಲಿ ಕಾರ್ಯಾಚರಣೆ ಶುರು ಮಾಡಿದೆ. ಶೋಧ ಕಾರ್ಯದ ವರದಿಯನ್ನು ಇಂದು ಹಿರಿಯಾಧಿಕಾರಿಗಳಿಗೆ ಡಿಸಿಪಿ ನೀಡಲಿದ್ದಾರೆ.
ಪತ್ರ ಬಂದಿದ್ದು ಯಾಕೆ: ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಪ್ರಕರಣ ಸಂಬಂಧ 421 ಆರೋಪಿಗಳ ಬಂಧನವಾಗಿದೆ. ಹಾಗೆಯೇ ಡ್ರಗ್ಸ್ ಪ್ರಕರಣದಲ್ಲಿ 16 ಆರೋಪಿಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಈ ಎರಡು ಗಂಭೀರ ಪ್ರಕರಣಗಳ ತನಿಖೆ ಸಿಸಿಬಿ ನಡೆಸುತ್ತಿದೆ. ಹೀಗಾಗಿ ಡ್ರಗ್ಸ್ ಪ್ರಕರಣದ ಜಾಮೀನು ಅರ್ಜಿ ವಿಚಾರವನ್ನ ಎನ್ಡಿಪಿಎಸ್ ನ್ಯಾಯಾಲಯ ನಡೆಸುತ್ತಿರುವ ಕಾರಣ ಪತ್ರ ಬರೆದು ಸಣ್ಣ ಪ್ರಮಾಣದ ಸ್ಫೋಟಕವನ್ನ ಇಟ್ಟು ಆರೋಪಿಗಳು ಕಳುಹಿಸಿದ್ದಾರೆ.
ಸದ್ಯ ಈ ಪ್ರಕರಣವನ್ನ ಎನ್ಡಿಪಿಎಸ್ ನ್ಯಾಯಾಲಯದ ನ್ಯಾಯಾಧೀಶರು ಗಂಭೀರವಾಗಿ ಪರಿಗಣನೆ ಮಾಡುವಂತೆ ತಿಳಿಸಿದ್ದಾರೆ. ಹಲಸೂರು ಗೇಟ್ ಉಪ ವಿಭಾಗದ ಎಸಿಪಿ ಇನ್ಸ್ಪೆಕ್ಟರ್ ಅವರನ್ನ ಕರೆಸಿ ಪತ್ರದ ವಿಚಾರವನ್ನ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ತಿಳಿಸಿದ್ದು, ಸದ್ಯ ಅನಾಮಿಕ ಪತ್ರದ ಬಗ್ಗೆ ಎಫ್ಐಆರ್ ದಾಖಲಾಗಿದೆ. ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ.