ಬೆಂಗಳೂರು: ಹಾಡಹಗಲೇ ಹ್ಯಾಂಡಲ್ ಲಾಕ್ ಮುರಿದು ದುಬಾರಿ ಬೆಲೆಯ ಬೈಕ್‌ಗಳನ್ನು ಕಳ್ಳತನ ಮಾಡಿ, ತಮಿಳುನಾಡಿನಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.
ಅತ್ತಿಬೆಲೆ ಮೂಲದ ಪ್ರಶಾಂತ್ ಬಂಧಿತ ಆರೋಪಿ. ವೃತ್ತಿಯಲ್ಲಿ ಪೇಂಟರ್ ಆಗಿದ್ದ ಆರೋಪಿ ವಿಲಾಸಿ ಜೀವನ ನಡೆಸಲು ಈ ರೀತಿ ಕಳ್ಳತನ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದ. ಸಾರ್ವಜನಿಕ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಲಾಗುತ್ತಿದ್ದ ದುಬಾರಿ ಬೆಲೆಯ ಬೈಕ್‌ಗಳ ಹ್ಯಾಂಡಲ್ ಮುರಿದು ಈತ ಕಳ್ಳತನ ಮಾಡುತ್ತಿದ್ದ. ಕದ್ದ ಬೈಕ್‌ಗಳನ್ನು ತಮಿಳುನಾಡಿನ ಅಂಬುರ್ನಲ್ಲಿರುವ ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದ.
![ದುಬಾರಿ ಬೆಲೆಯ ಬೈಕ್‌ಗಳನ್ನು ಕದ್ದು ತಮಿಳುನಾಡಿನಲ್ಲಿ ಮಾರಾಟ; ಆರೋಪಿ ಬಂಧನ](https://etvbharatimages.akamaized.net/etvbharat/prod-images/kn-bng-03-mahadevapura-crime-7202806_22112022122452_2211f_1669100092_326.jpg)
ಕಳೆದ ಎರಡೂವರೆ ವರ್ಷಗಳ ಹಿಂದ ಕೂಡ ಇದೇ ರೀತಿ ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಈತ ಜಾಮೀನಿನ ಮೇರೆಗೆ ಹೊರಬಂದು ಮತ್ತೆ ಅದೇ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾನೆ.
ಮಹದೇವಪುರ, ಸರ್ಜಾಪುರ, ವೈಟ್ ಫೀಲ್ಡ್, ಕೆ.ಆರ್.ಪುರ, ಸೋಲದೇವಹಳ್ಳಿ, ತುಮಕೂರು, ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈತ ಬೈಕ್ ಕಳ್ಳತನ ಮಾಡುತ್ತಿದ್ದ. ಇನ್ಸ್‌ಪೆಕ್ಟರ್ ಪ್ರಶಾಂತ್ ವರ್ಣಿ ಹಾಗೂ ಸಬ್ ಇನ್‌ಸ್ಪೆಕ್ಟರ್ ಹರಿನಾಥ್ ಬಾಬು ನೇತೃತ್ವದ ತಂಡ ಈತನನ್ನು ಬಂಧಿಸಿದ್ದು, 25 ಲಕ್ಷ ಬೆಲೆಯ 42 ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಸೂರಿಲ್ಲದೇ ಬೀದಿಗೆ ಬಿದ್ದ ವೃದ್ಧ ದಂಪತಿಗೆ ಆಸರೆಯಾದ ಹೃದಯವಂತ ಯುವಕರು