ಬೆಂಗಳೂರು: 2020-21ನೇ ಆರ್ಥಿಕ ವರ್ಷ ರಾಜ್ಯದ ಪಾಲಿಗೆ ತೀವ್ರ ಹಣಕಾಸು ಸಂಕಷ್ಟ ತಂದ ವರ್ಷ. ಹಿಂದೆಂದೂ ಕಂಡರಿಯದ ಆದಾಯ ಕೊರತೆಯ ಮಧ್ಯೆ ರಾಜ್ಯ ಸರ್ಕಾರ ವಿವಿಧ ಕೈಗಾರಿಕಾ ಘಟಕಗಳಿಗೆ ಪ್ರೋತ್ಸಾಹಕವಾಗಿ ಹಲವು ವಿನಾಯಿತಿಗಳನ್ನು ನೀಡಿದೆ. ಆ ಮೂಲಕ ಸಾವಿರಾರು ಮೊತ್ತದ ರಾಜಸ್ವವನ್ನು ಕೈಬಿಟ್ಟಿದೆ. ಅದರ ಸಮಗ್ರ ವರದಿ ಇಲ್ಲಿದೆ.
2020-21ನೇ ಆರ್ಥಿಕ ವರ್ಷ ಕೋವಿಡ್ ಅಟ್ಟಹಾಸಕ್ಕೆ ಬಲಿಯಾದ ವರ್ಷ. ಲಾಕ್‌ಡೌನ್ ಹೇರಿದ ಆರ್ಥಿಕ ಸಂಕಷ್ಟ ರಾಜ್ಯದ ಬೊಕ್ಕಸವನ್ನೇ ಅಲುಗಾಡಿಸಿ ಬಿಟ್ಟಿದೆ. ಆದಾಯದ ಬಹುತೇಕ ಮೂಲಗಳು ಸೊರಗಿದ ಕಾರಣ ಖಜಾನೆ ಖಾಲಿಯಾಗಿಬಿಟ್ಟಿತ್ತು. ಆರ್ಥಿಕ ಸಂಕಷ್ಟದ ಮಧ್ಯೆ ರಾಜ್ಯ ಸರ್ಕಾರ ಕೈಗಾರಿಕಾ ಘಟಕಗಳಿಗೆ ಪ್ರೋತ್ಸಾಹಕವಾಗಿ ವಿವಿಧ ವಿನಾಯಿತಿಗಳನ್ನು ನೀಡಿದೆ. ಇದರಲ್ಲಿ ಪ್ರಮುಖವಾಗಿ ಜಿಎಸ್ಟಿ ಜಾರಿಯಾದ ಬಳಿಕ ಹಲವು ಕೈಗಾರಿಕಾ ಘಟಕಗಳಿಗೆ ವ್ಯಾಟ್ ವಿನಾಯಿತಿ, ಕೇಂದ್ರ ಮಾರಾಟ ತೆರಿಗೆ ಮರುಪಾವತಿ ಸೇರಿದಂತೆ ಹಲವು ವಿನಾಯಿತಿಗಳನ್ನು ನೀಡುತ್ತಿದೆ. ಅದರಂತೆ 2020-21ನೇ ಸಾಲಿನಲ್ಲಿ ಸರ್ಕಾರ ಅನೇಕ ಕೈಗಾರಿಕಾ ಘಟಕಗಳಿಗೆ ವಿನಾಯಿತಿ ನೀಡಿದೆ. ಆ ಮೂಲಕ ಸಾವಿರಾರು ಕೋಟಿ ಮೊತ್ತದ ರಾಜಸ್ವವನ್ನು ಕೈಬಿಟ್ಟಿದೆ.
![exemption-granted-to-various-industrial-units-in-the-financial-year-2020-21-was-rs-1075-crore](https://etvbharatimages.akamaized.net/etvbharat/prod-images/kn-bng-02-industrialunits-exemptions-script-7201951_08042021184924_0804f_1617887964_949.jpg)
ವಿನಾಯಿತಿ/ಕೈಬಿಟ್ಟ ರಾಜಸ್ವ ಎಷ್ಟು?:
ರಾಜ್ಯ ಸರ್ಕಾರ 2020-21ನೇ ಆರ್ಥಿಕ ಸಂಕಷ್ಟದ ಮಧ್ಯೆ ಪ್ರೋತ್ಸಾಹಕವಾಗಿ ವಿವಿಧ ಕೈಗಾರಿಕಾ ಘಟಕಗಳಿಗೆ ವಿನಾಯಿತಿಗಳನ್ನು ನೀಡಿದೆ. ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ ವಿವಿಧ ಕೈಗಾರಿಕೆಗಳಿಗೆ ನೀಡಿದ ತೆರಿಗೆ ವಿನಾಯಿತಿ ರೂಪದಲ್ಲಿ ಬರೋಬ್ಬರಿ 1075.79 ಕೋಟಿ ರೂ.ಗಳನ್ನು ಬಿಟ್ಟು ಕೊಟ್ಟಿದೆ. ರಾಜ್ಯ ಸರ್ಕಾರ ವ್ಯಾಟ್ ಮರುಪಾವತಿ, ಕೇಂದ್ರ ಮಾರಾಟ ತೆರಿಗೆ ಮರುಪಾವತಿ, ಬಡ್ಡಿ ರಹಿತ ವ್ಯಾಟ್ ಸಾಲ, ಬಡ್ಡಿ ರಹಿತ ಎಸ್ ಜಿಎಸ್ಟಿ ಸಾಲದ ರೂಪದಲ್ಲಿ ಅನೇಕ ಕೈಗಾರಿಕೆಗಳಿಗೆ ವಿನಾಯಿತಿಗಳನ್ನು ನೀಡಿ, ಬರುವ ರಾಜಸ್ವವನ್ನು ಕೈಬಿಟ್ಟಿದೆ.
ಆ ಮೂಲಕ 2020-21ನೇ ಸಾಲಿನಲ್ಲಿ ಸುಮಾರು 1,075.79 ಕೋಟಿ ರೂ. ರಾಜಸ್ವವನ್ನು ಕೈಬಿಟ್ಟಂತಾಗಿದೆ. 8 ಘಟಕಗಳಿಗೆ ವ್ಯಾಟ್ ಮರುಪಾವತಿ, 2 ಕೈಗಾರಿಕಾ ಘಟಕಗಳಿಗೆ ಕೇಂದ್ರ ಮಾರಾಟ ತೆರಿಗೆ ಮರುಪಾವತಿ, 7 ಘಟಕಗಳಿಗೆ ಬಡ್ಡಿ ರಹಿತ ವ್ಯಾಟ್ ಸಾಲ ಹಾಗೂ 17 ಘಟಕಗಳಿಗೆ ಬಡ್ಡಿ ರಹಿತ ಎಸ್ಜಿಎಸ್ಟಿ ಸಾಲ ಸೇರಿದಂತೆ ಒಟ್ಟು 34 ಕೈಗಾರಿಕಾ ಘಟಕಗಳಿಗೆ ತೆರಿಗೆ ವಿನಾಯಿತಿಗಳನ್ನು ನೀಡಿದೆ.
ಅದೇ 2019-20 ಆರ್ಥಿಕ ವರ್ಷದಲ್ಲಿ ಕೇಂದ್ರ ಮಾರಾಟ ತೆರಿಗೆ ಮರುಪಾವತಿ ರೂಪದಲ್ಲಿ ಕೇವಲ 10.71 ಕೋಟಿ ರೂ. ಮಾತ್ರ ವಿನಾಯಿತಿ ನೀಡಲಾಗಿತ್ತು. ಆದರೆ, 2020-21ನೇ ಸಾಲಿನಲ್ಲಿ 8 ಕೈಗಾರಿಕಾ ಘಟಕಗಳಿಗೆ 12.70 ಕೋಟಿ ರೂ. ವ್ಯಾಟ್ ಮರುಪಾವತಿ ಮಾಡಲಾಗಿದೆ. 2 ಘಟಕಗಳಿಗೆ 1.16 ಕೋಟಿ ರೂ. ಕೇಂದ್ರ ಮಾರಾಟ ತೆರಿಗೆ ಮರುಪಾವತಿ ಮಾಡಲಾಗಿದೆ. ಇನ್ನು 7 ಘಟಕಗಳಿಗೆ 143.04 ಕೋಟಿ ರೂ. ಬಡ್ಡಿ ರಹಿತ ವ್ಯಾಟ್ ಸಾಲ ನೀಡಿದೆ. ಅದೇ ರೀತಿ 17 ಘಟಕಗಳಿಗೆ 918.88 ಕೋಟಿ ರೂ. ಬಡ್ಡಿ ರಹಿತ ಎಸ್ಜಿಎಸ್ಟಿ ಸಾಲದ ರೂಪದಲ್ಲಿ ವಿನಾಯಿತಿಗಳನ್ನು ಸರ್ಕಾರ ನೀಡಿದೆ.
ಪ್ರಮುಖ ಘಟಕಗಳಿಗೆ ನೀಡಿದ ವಿನಾಯಿತಿ ವಿವರ:
ಬಿಡದಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್- 29.35 ಕೋಟಿ ರೂ.
ಕೋರಮಂಗಲ ಟಿವಿಎಸ್ ಮೋಟಾರ್ ಕಂ.- 22.05 ಕೋಟಿ ರೂ.
ಕೋಲಾರ ಹೋಂಡಾ ಮೋಟಾರ್ಸ್- 158 ಕೋಟಿ ರೂ.
ಬೆಂಗಳೂರಿನ ಕಲ್ಯಾಣಿ ಟೆಕ್ ಪಾರ್ಕ್- 3.56 ಕೋಟಿ ರೂ.
ಕೋಲಾರ ಬಾಡ್ವೆ ಎಂಜಿನಿಯರಿಂಗ್ ಲಿ.- 107.95 ಕೋಟಿ ರೂ.
ಗೋಕಾಲ್ ಡಾಲ್ಮಿಯಾ ಸಿಮೆಂಟ್- 19.82 ಕೋಟಿ ರೂ.
ಸಂಡೂರಿನ ಜೆಎಸ್ಡಬ್ಲ್ಯೂ ಲಿ.- 569.27 ಕೋಟಿ ರೂ.
ಧಾರವಾಡದ ಟಾಟಾ ಮೋಟಾರ್ಸ್- 76.90 ಕೋಟಿ ರೂ.
ಧಾರವಾಡದ ಟಾಟಾ ಮಾರ್ಕೋಪೋಲೋ- 23.13 ಕೋಟಿ ರೂ.
ಮಂಗಳೂರಿನ ಎಂಆರ್ಪಿಎಲ್ ಲಿ.- 7.48 ಕೋಟಿ ರೂ.
ಮೈಸೂರು ನೆಸ್ಟ್ಲೇ ಇಂಡಿಯಾ- 4.69 ಕೋಟಿ ರೂ.
ಹೊಸಕೋಟೆ ಎಸ್ಎಲ್ಆರ್ ಮೆಟಾಲಿಕ್ಸ್ ಲಿ.- 9.20 ಕೋಟಿ ರೂ.