ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಚಿವಾಲಯ ಸೇರಿದಂತೆ ರಾಜ್ಯಮಟ್ಟದ ಕಚೇರಿ ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳ ಸಿಬ್ಬಂದಿಗೆ ಮಾರ್ಚ್ 31ರವರೆಗೆ ಕಚೇರಿ ಹಾಜರಾತಿಗೆ ವಿನಾಯಿತಿ ನೀಡಲಾಗುತ್ತಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಒಳಾಡಳಿತ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಸಾರಿಗೆ ಹಾಗೂ ಇಂಧನ ಇಲಾಖೆಗಳು ಹಾಜರಾತಿ ವಿನಾಯಿತಿಗೆ ಒಳಪಟ್ಟಿವೆ.
ಈ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಇತರೆ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್ 'ಬಿ', ಗ್ರೂಪ್ 'ಸಿ' ಮತ್ತು ಗ್ರೂಪ್ 'ಡಿ' ಅಧಿಕಾರಿ ಹಾಗು ನೌಕರರಿಗೆ ಮಾರ್ಚ್ 31ರವರೆಗೆ ಕಚೇರಿಗೆ ಬರುವುದಕ್ಕೆ ವಿನಾಯಿತಿ ನೀಡಲಾಗಿದೆ. ಹಾಜರಾತಿ ವಿನಾಯಿತಿ ನೀಡುವ ಬಗ್ಗೆ ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿ ಅಥವಾ ಮುಖ್ಯಸ್ಥರು ನಿರ್ಧರಿಸಬಹುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಹಾಜರಾತಿಯಿಂದ ವಿನಾಯಿತಿ ನೀಡಲ್ಪಟ್ಟ ಎಲ್ಲಾ ಅಧಿಕಾರಿ/ನೌಕರರು ಕೇಂದ್ರ ಸ್ಥಾನದಲ್ಲಿ ಲಭ್ಯವಿರಬೇಕು. ತುರ್ತು ಕಾರಣಗಳಿದ್ದಾಗ ಶೇ 25ಕ್ಕೆ ಮೀರದಂತೆ ಯಾವುದೇ ಕಾರಣ ನೀಡದೆ ಕಚೇರಿಗೆ ಹಾಜರಾಗುವ ನಿಬಂಧನೆ ಹಾಕಲಾಗಿದೆ.
ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರು ವೈದ್ಯಕೀಯ ಹಾಗೂ ಇತರ ಕಾರಣಗಳಿಗೆ ಮಾರ್ಚ್ 31ರವರಗೆ ವಿನಾಯಿತಿ ಬಯಸಿದರೇ ಇಲಾಖೆಯ ಕಾರ್ಯದರ್ಶಿಗಳು/ ಮುಖ್ಯಸ್ತರು ಸೂಕ್ತ ನಿರ್ಣಯ ತೆಗೆದುಕೊಳ್ಳಬಹುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯ ಭಾಸ್ಕರ್ ಅವರು ಆದೇಶಿಸಿದ್ದಾರೆ.