ಬೆಂಗಳೂರು: ಕೋವಿಡ್ ಸೋಂಕನ್ನು ನಿಯಂತ್ರಿಸಲು ಬಿಬಿಎಂಪಿ ಬೂತ್ ಲೆವೆಲ್ ಅಧಿಕಾರಿಗಳು, ವಾರ್ಡ್ ಲೆವೆಲ್ ಅಧಿಕಾರಿಗಳು, ಸೆಕ್ಟರ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಿಸಿದೆ. ಆದರೆ ಹಲವಾರು ಅಧಿಕಾರಿಗಳು ವೈದ್ಯಕೀಯ ಹಾಗೂ ವಯಸ್ಸಾದ ಕಾರಣ ನೀಡಿ, ಕೋವಿಡ್ ಕಾರ್ಯದಿಂದ ವಿನಾಯಿತಿ ನೀಡಲು ಆಯುಕ್ತರ ಕಚೇರಿಗೆ ಬಂದು ಮನವಿ ಮಾಡುತ್ತಿದ್ದಾರೆ.
ಇದರಿಂದ ಆಯುಕ್ತರ ಕಚೇರಿಯಲ್ಲಿ ಸಾಮಾಜಿಕ ಅಂತರವಿಲ್ಲದೆ ಜನಸಂದಣಿಯಾಗುತ್ತಿದೆ. ಹಾಗಾಗಿ, ಈ ಎಲ್ಲ ಮನವಿಗಳನ್ನು ವಲಯ ಮಟ್ಟದಲ್ಲೇ ಪರಿಶೀಲಿಸಿ ನಿರ್ಣಯ ಕೈಗೊಳ್ಳುವಂತೆ ಅಪರ ಹಾಗೂ ಜಂಟಿ ಆಯುಕ್ತರಿಗೆ ಉಪಆಯುಕ್ತರು ಆದೇಶ ಹೊರಡಿಸಿದ್ದಾರೆ.
ಇದೇ ವೇಳೆ ಅಧಿಕಾರಿ- ಸಿಬ್ಬಂದಿ ವಲಯದಲ್ಲಿ ಆಂತರಿಕ ಸ್ಥಳ ಬದಲಾವಣೆ ಕೇಳಿದರೆ ಮಾಡಬೇಕು. ವಲಯ ಬದಲಾವಣೆ ಕೇಳಿದರೆ ಕೇಂದ್ರ ಕಚೇರಿಗೆ ಈ ಮನವಿ ರವಾನಿಸಬೇಕು. ಅಧಿಕಾರಿ, ಸಿಬ್ಬಂದಿ ಸುಳ್ಳು ಮಾಹಿತಿ ನೀಡಿ ನಿರ್ಲಕ್ಷ್ಯ ತೋರಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.