ಬೆಂಗಳೂರು: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಪರೀಕ್ಷೆ ಮಾಡುವಂತೆ ಎಲ್ಲ ಕಾಲೇಜುಗಳಿಗೆ ಪಿಯು ಬೋರ್ಡ್ ಸುತ್ತೋಲೆ ಹೊರಡಿಸಿದೆ.
ಕಡ್ಡಾಯವಾಗಿ 2 ವಿಷಯಗಳಿಗೆ ಪರೀಕ್ಷೆ ನಡೆಸಲು ಬೋರ್ಡ್ ಸೂಚನೆ ನೀಡಿದ್ದು, ಮುಂಚೆ ಪ್ರಥಮ ಪಿಯುಸಿ ಪಾಸ್ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವರು ಹೇಳಿದ್ದರು. ಆದರೆ, ಆನ್ಲೈನ್ ಪರೀಕ್ಷೆ ನಡೆಸಲು ಇದೀಗ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಪಿಯು ಬೋರ್ಡ್ ಎರಡು ಮಾದರಿಯ ಪ್ರಶ್ನೆ ಪತ್ರಿಕೆ ರೂಪಿಸಿದ್ದು, ವೆಬ್ಸೈಟ್ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಲಭ್ಯವಿದೆ.
ಹೇಗೆ ನಡೆಯಲಿದೆ ಪ್ರಥಮ ಪಿಯುಸಿ ಆನ್ಲೈನ್ ಪರೀಕ್ಷೆ?
ಇಲಾಖೆ ವೆಬ್ಸೈಟ್ನಲ್ಲಿರುವ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳು ಡೌನ್ಲೋಡ್ ಮಾಡಿಕೊಳ್ಳಬೇಕು. ಪ್ರಶ್ನೆಗಳಿಗೆ ಉತ್ತರ ಬರೆದು ವಾಟ್ಸ್ಆ್ಯಪ್, ಇ-ಮೇಲ್, ಅಂಚೆಯಲ್ಲಿ ಕಳುಹಿಸಬೇಕು. ವಿದ್ಯಾರ್ಥಿಗಳು ಉಪನ್ಯಾಸಕರಿಗೆ ಉತ್ತರ ಪತ್ರಿಕೆ ರವಾನಿಸಬೇಕು. ನಂತರ ಉಪನ್ಯಾಸಕರು ಮೌಲ್ಯಮಾಪನ ಮಾಡಬೇಕು.
ಮೌಲ್ಯಮಾಪನದ ಬಳಿಕ ಉಪನ್ಯಾಸಕರು ಸ್ಟೂಡೆಂಟ್ಸ್ ಸಾಧನೆ ಟ್ರಾಕಿಂಗ್ ಸಿಸ್ಟಂ ಮೂಲಕ ಫಲಿತಾಂಶ ಅಪ್ಲೋಡ್ ಮಾಡಬೇಕು. ಅಸೈನ್ಮೆಂಟ್ ಲೆಕ್ಕಾಚಾರದಲ್ಲಿ ಪರೀಕ್ಷೆ ನಡೆಸಲು ಪಿಯು ಬೋರ್ಡ್ ನಿರ್ಧಾರ ಮಾಡಿದ್ದು, ಮೊದಲ ಅಸೈನ್ಮೆಂಟ್ ತಲುಪಲು ಜೂ.20 ಕೊನೆಯ ದಿನವಾಗಿದ್ದು, ಉಪನ್ಯಾಸಕರು ಜೂ.25ರೊಳಗೆ ಮೌಲ್ಯಮಾಪನ ಮಾಡಬೇಕು.
ಎರಡನೇ ಅಸೈನ್ಮೆಂಟ್ ಪ್ರಕ್ರಿಯೆ ಜೂ.26 ರಿಂದ ಜು.5ರ ಒಳಗೆ ನಡೆಯಬೇಕು. ಉಪನ್ಯಾಸಕರು ಜು.10ರೊಳಗೆ ಮೌಲ್ಯಮಾಪನ ಮಾಡಿ ಎರಡು ಪತ್ರಿಕೆಗಳ ಅಂಕವನ್ನು ಸಮೀಕರಣ ಮಾಡಿ ಜು.15 ರೊಳಗೆ ಮುಗಿಸಿ, ಜು.20ರೊಳಗೆ ಸ್ಯಾಟ್ಸ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕು.
ಎರಡೂ ಪರೀಕ್ಷೆಗಳ ಅಂಕವನ್ನು ಜು.20ರೊಳಗೆ ಅಪ್ಲೋಡ್ ಮಾಡಲು ಡೆಡ್ಲೈನ್ ಕೊಡಲಾಗಿದೆ.
ಮೌಲ್ಯಮಾಪನ ಪ್ರಕ್ರಿಯೆ:
ವಿದ್ಯಾರ್ಥಿಗಳಿಗೆ ಪ್ರತಿ ವಿಷಯದಲ್ಲಿ ಕನಿಷ್ಠ 35 ಅಂಕ ಕಡ್ಡಾಯ, ಪ್ರತಿ ಪತ್ರಿಕೆಗೆ 30 ರಂತೆ 2 ಪತ್ರಿಕೆಗೆ 60 ಅಂಕ ನೀಡಬೇಕು. 5 ಅಂಕವನ್ನ ಉಪನ್ಯಾಸಕರು ಆಂತರಿಕ ಅಂಕ ಎಂದು ಕೊಡಬೇಕು.
ಪ್ರಯೋಗ ಸಹಿತ ವಿಷಯಗಳಿಗೆ ಪ್ರತ್ಯೇಕ ಅಂಕ ನೀಡಬೇಕು. ಈ ಹಿಂದೆ ನಡೆಸಿದ ಪ್ರಾಯೋಗಿಕ ತರಗತಿಗಳ ಆಧಾರದ ಮೇಲೆ ಅಂಕ ನಿರ್ಧರಿಸಿ ಎಂದು ರಾಜ್ಯದ ಎಲ್ಲ ಪಿಯು ಕಾಲೇಜುಗಳಿಗೆ ಪಿಯು ಬೋರ್ಡ್ ಸುತ್ತೋಲೆ ಹೊರಡಿಸಿದೆ.