ಬೆಂಗಳೂರು : ಕೊರೊನಾ ಸೋಂಕಿಗೆ ತುತ್ತಾಗಿದ್ದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮುನಿರತ್ನ ಇದೀಗ ಚೇತರಿಸಿಕೊಂಡಿದ್ದಾರೆ.
ಸೋಂಕು ದೃಢಪಟ್ಟಿದ್ದರಿಂದ ಮುನಿರತ್ನ ಅವರು ಆಗಸ್ಟ್ 30ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದರಿಂದ, ನಾಳೆ ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಮುನಿರತ್ನ ಆಪ್ತರಾದ ಜಾಲಹಳ್ಳಿ ವಾರ್ಡ್ನ ಮಾಜಿ ಕಾರ್ಪೊರೇಟರ್ ಶ್ರೀನಿವಾಸ್ ಮೂರ್ತಿ ಈ ಬಗ್ಗೆ ಮಾತನಾಡಿ, ಇದೀಗ ಕ್ಷೇತ್ರಕ್ಕೆ ಹಾಲಿ ಶಾಸಕರೂ ಇಲ್ಲ. ಜೊತೆಗೆ ಕಾರ್ಪೊರೇಟರ್ಸ್ ಅವಧಿ ಕೂಡ ನಿನ್ನೆಗೆ ಮುಕ್ತಾಯವಾಗಿದೆ.
ಕೊರೊನಾ ನಡುವೆ ಮಳೆ ಸಮಸ್ಯೆ ಕೂಡ ಕ್ಷೇತ್ರಕ್ಕೆ ಎದುರಾಗಿದೆ. ಕೋವಿಡ್ ವೇಳೆ ಓಡಾಡಿ ಬಡ ಜನರಿಗೆ ಆಹಾರ ಕಿಟ್ ಹಂಚಿದ್ದರಿಂದ ಮಾಜಿ ಶಾಸಕರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇದೀಗ ಗುಣಮುಖರಾಗಿದ್ದಾರೆ ಎಂದರು.