ಬೆಂಗಳೂರು: ತಲೆಮರೆಸಿಕೊಂಡಿದ್ದ ಡಿ.ಜೆ. ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇದಕ್ಕೂ ಮುನ್ನ ಮಾಜಿ ಮೇಯರ್ಗೆ ಆಶ್ರಯ ನೀಡಿದ್ದ ಆರೋಪಿ ರಿಯಾಜುದ್ದೀನ್ ಎಂಬಾತನನ್ನು ಬಂಧಿಸಲಾಗಿತ್ತು. ಬಳಿಕ ಆತ ನೀಡಿದ ಮಾಹಿತಿ ಮೇರೆಗೆ ಬೆಂಗಳೂರಿನ ಅಜ್ಞಾತ ಸ್ಥಳದಲ್ಲಿ ಅವಿತುಕೊಂಡಿದ್ದ ಸಂಪತ್ ರಾಜ್ ಅವರನ್ನು ಬಂಧಿಸಿರುವುದಾಗಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಡಿಜೆ ಹಳ್ಳಿ ಗಲಭೆ ವೇಳೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಶಾಸಕರ ನಿವಾಸಕ್ಕೆ ಬೆಂಕಿ ಹಾಕುವಂತೆ ದುಷ್ಕರ್ಮಿಗಳಿಗೆ ಪ್ರಚೋದನೆ ನೀಡಿದ ಆರೋಪ ಸಂಪತ್ ರಾಜ್ ಮೇಲಿದೆ.
ಇದನ್ನೂ ಓದಿ: ಮಾಜಿ ಮೇಯರ್ ಸಂಪತ್ ರಾಜ್ಗೆ ಆಶ್ರಯ ನೀಡಿದ್ದ ಆರೋಪಿ ಅಂದರ್
ಕೊರೊನಾ ವೈರಸ್ ತಗುಲಿದೆ ಎಂದು ಸಂಪತ್ ರಾಜ್ ಸೆ. 14ರಿಂದ 29ರವರೆಗೂ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ 2ನೇ ಬಾರಿಗೆ ಅಕ್ಟೋಬರ್ 4ರಿಂದ 14ರವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ನಿರೀಕ್ಷಣಾ ಜಾಮೀನು ಸಿಗಲ್ಲ ಎಂದು ಗೊತ್ತಾದಾಗ ಸಂಪತ್ ರಾಜ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಸಂಪತ್ ರಾಜ್ರನ್ನು ಡಿಸ್ಚಾರ್ಜ್ ವೇಳೆ ಮಾಹಿತಿ ನೀಡುವಂತೆ ಆಸ್ಪತ್ರೆಗೆ ಸಿಸಿಬಿ ಮನವಿ ಮಾಡಿತ್ತು. ಆದರೆ ಅ. 23ರಂದು ಸಣ್ಣ ಸುಳಿವೂ ಸಿಗದ ಹಾಗೆ ಸಂಪತ್ ರಾಜ್ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದರು. ನಂತರ ಸಂಪತ್ ರಾಜ್‌ಗಾಗಿ ಸಿಸಿಬಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಸಂಪತ್ರಾಜ್ಗಾಗಿ ಹುಡುಕಾಟ ನಡೆಸಿ ಸಿಸಿಬಿ ಪೊಲೀಸರು ಹೈರಾಣಾಗಿ ಹೋಗಿದ್ದರು. ಅಂತೂ ಒಂದು ತಿಂಗಳ ನಂತರ ನಿನ್ನೆ ಮಧ್ಯರಾತ್ರಿ ಸಿಸಿಬಿ ಪೊಲೀಸರು ಸಂಪತ್ ರಾಜ್ ಅವರನ್ನು ಅರೆಸ್ಟ್ ಮಾಡಿದ್ದಾರೆ.