ಬೆಂಗಳೂರು: ರಾಜ್ಯದ ಮಾಜಿ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಕಳೆದು ತಿಂಗಳು ಸೈಬರ್ ವಂಚಕನ ಮೂಲಕ ಕಳೆದುಕೊಂಡಿದ್ದ ಹಣವನ್ನು ಮರಳಿ ಪಡೆದುಕೊಂಡಿದ್ದಾರೆ.
ಬ್ಯಾಂಕ್ ಸಹಾಯವಾಣಿಯಂತೆ ಶಂಕರ್ ಬಿದರಿಗೆ ಕರೆ ಮಾಡಿದ್ದ ವಂಚಕ ಅವರ ಖಾತೆಯಿಂದ 89 ಸಾವಿರ ರೂ. ಹಣ ಲಪಟಾಯಿಸಿದ್ದರು. ಈ ಸಂಬಂಧ ನಿವೃತ್ತ ಟಾಪ್ ಕಾಪ್ ಶಂಕರ್ ಬಿದರಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಕ್ಟೊಬರ್ 11 ಕ್ಕೆ ಸಂದೇಶ, ಮರುದಿನ ಕರೆ: ಸೈಬರ್ ವಂಚಕರು ವ್ಯವಸ್ಥಿತವಾಗಿ ಸ್ವಲ್ಪವೂ ಅನುಮಾನ ಬರದಂತೆ ಅಕ್ಟೋಬರ್ 11ರಂದು ಶಂಕರ್ ಬಿದರಿ ಮೊಬೈಲ್ಗೆ ಮೆಸೇಜ್ ಕಳುಹಿಸಿದ್ದರು. ಮೆಸೇಜ್ನಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಲಗ್ಗತ್ತಿಸಲಾಗಿರುವ ಪ್ಯಾನ್ ಸಂಖ್ಯೆ ನವೀಕರಿಸುವಂತೆ ಹೇಳಲಾಗಿತ್ತು. ಅಕ್ಟೋಬರ್ 12ರಂದು ಮಧ್ಯಾಹ್ನ ಕರೆ ಮಾಡಿ ತಮ್ಮನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದರು. ನಿನ್ನೆಯೇ ಮೆಸೇಜ್ ಬಂದಿರುವ ವಿಷಯ ತಿಳಿಸಿ ನಂಬಿಕೆ ಗಳಿಸಿದ್ದರು. ಇತ್ತ ದುಬೈಗೆ ಹೊರಡುವ ಅವಸರದಲ್ಲಿದ್ದ ಶಂಕರ್ ಬಿದರಿ ಓಟಿಪಿ ಶೇರ್ ಮಾಡಿ ಹಣ ಕಳೆದುಕೊಂಡಿದ್ದರು.
ಕರೆ ಮಾಡಿದ್ದ ವಂಚಕ ಬ್ಯಾಂಕ್ ಸಿಬ್ಬಂದಿ ಎಂದು ನಂಬಿಸಿದ್ದರು. ಕೆಲ ದಿನಗಳ ನಂತರ ಆನ್ ಲೈನ್ ಶಾಪಿಂಗ್ ಹಣ ಪಾವತಿಸುತ್ತಿರುವಾಗ ಮೊಬೈಲ್ನಲ್ಲಿ ಹಣ ಕಡಿತದ ಮೆಸೇಜ್ ನೋಡಿದ್ದರು. 89 ಸಾವಿರ ರೂ ಖಾತೆಯಿಂದ ಕಡಿತವಾಗಿತ್ತು. ಕೂಡಲೇ ಕರೆ ಮಾಡಿದ್ದ ವ್ಯಕ್ತಿಗೆ ಫೋನ್ ಮಾಡಿದ್ದ ಶಂಕರ್ ಹಣ ಹಿಂದಿರುಗಿಸಬೇಕು. ಇಲ್ಲವಾದಲ್ಲಿ ನೀವು ಎಲ್ಲೇ ಕುಳಿತದ್ರೂ ನಿಮ್ಮನ್ನು ಹಿಡಿಯಬಲ್ಲೆ ಎಂದು ಬೆದರಿಕೆ ಹಾಕಿದ್ದರು.
ತಪ್ಪೊಪ್ಪಿಕೊಂಡ ವಂಚಕ: ಮರು ಕರೆ ಮಾಡಿದ ಪಶ್ಚಿಮ ಬಂಗಾಳ ಮೂಲದ ವಂಚಕ, ತನ್ನ ತಪ್ಪನ್ನು ಒಪ್ಪಿಕೊಂಡನು. ನಂತರ ಎಲ್ಲ ಹಣವನ್ನು ಹಿಂದಿರುಗಿಸಿದನು. ನಾನು ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ ಎಂದು ಶಂಕರ್ ಬಿದರಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಫೆಬ್ರವರಿಯಲ್ಲಿ ಶಂಕರ್ ಬಿದರಿ ಇ-ಮೇಲ್ ಹ್ಯಾಕ್: ಫೆಬ್ರವರಿಯಲ್ಲಿ ಶಂಕರ್ ಬಿದರಿ ಅವರ ಇ-ಮೇಲ್ ಹ್ಯಾಕ್ ಮಾಡಲಾಗಿತ್ತು. ಶಂಕರ್ ಬಿದರಿ ಸ್ನೇಹಿತರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್ಎಸ್ಸಿ ಕೋಡ್ ಕಳುಹಿಸಿ ನಂತರ ತುರ್ತಾಗಿ 25 ಸಾವಿರ ರೂ ಹಣ ಪಾವತಿಸುವಂತೆ ಮನವಿ ಮಾಡಿಕೊಂಡಿದ್ದರು. ಮೇಲ್ ನೋಡಿದ ಶಂಕರ್ ಬಿದರಿ ಗೆಳಯ 25 ಸಾವಿರ ರೂ ತಕ್ಷಣ ವರ್ಗಾಯಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ನಲ್ಲಿ ಪೊಲೀಸರು ನ್ಯಾಗಾಲ್ಯಾಂಡ್ ಮೂಲದ ಮೂವರನ್ನು ಬಂಧಿಸಿದ್ದರು.