ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಕ್ಸ್ ಬಾಯ್ ಫ್ರೆಂಡ್ ಒಬ್ಬ ಯುವತಿಯ ಖಾಸಗಿ ಫೋಟೊ ವೈರಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬಳಿಕ ವನಿತಾ ಸಹಾಯವಾಣಿ ಕೈಗೆ ಸಿಕ್ಕ ಯುವಕ, ಫೋಟೋ ಡಿಲೀಟ್ ಮಾಡಿದ್ದಾನೆ.
ಹೌದು, ಅವರಿಬ್ಬರೂ ಒಂದೇ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಾ, ಮೊದ ಮೊದಲು ಸ್ನೇಹಿತರಾಗಿದ್ರು. ಬರ್ತಾ ಬರ್ತಾ ಇಬ್ಬರೂ ಪ್ರೇಮಿಗಳಾಗಿ, ಸುಮಾರು 5 ವರ್ಷ ಪರಸ್ಪರ ಒಪ್ಪಿಕೊಂಡು ಪ್ರೀತಿಸುತ್ತಿದ್ರು. ಆದರೆ ಇವರಿಬ್ಬರೂ ಅಂತರ್ಜಾತಿಯವರಾದ ಕಾರಣ ಹುಡುಗಿ ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ. ಹೀಗಾಗಿ ಹುಡುಗಿಗೆ ಬೇರೆ ಹುಡುಗನ ಜೊತೆ ಮನೆಯವರು ಮದುವೆ ಮಾಡಿ ಕೊಟ್ಟರು.
ಸಮಸ್ಯೆ ಶುರುವಾಗಿದ್ದು ಇಲ್ಲಿಂದಲೇ. ಇದನ್ನ ಸಹಿಸಲಾಗದ ಎಕ್ಸ್ ಬಾಯ್ಫ್ರೆಂಡ್ ಇಬ್ಬರ ಕೆಲ ಖಾಸಗಿ ಫೋಟೊಗಳನ್ನ ಫೇಸ್ಬುಕ್, ವಾಟ್ಸಪ್ ಹಾಗೂ ಯುವತಿಯ ಗೆಳೆಯ-ಗೆಳತಿಯರಿಗೆ ವೈರಲ್ ಮಾಡ್ತೀನಿ ಎಂದು ಬೆದರಿಕೆ ಹಾಕಿ, ನಂತರ ಅದನ್ನ ವೈರಲ್ ಮಾಡಿಯೇ ಬಿಟ್ಟ.
ಆದ್ರೆ ಹೊಸತಾಗಿ ಬೇರೆ ಯುವಕನ ಜೊತೆ ಮದುವೆಯಾದ ಯುವತಿ, ಗಂಡನ ಜೊತೆ ರಿಸೆಪ್ಶನ್ ಸೆಲೆಬ್ರೇಷನ್ಗೆ ತೆರಳುತ್ತಿದ್ದ ವೇಳೆ ಆಕೆಯ ಮೊಬೈಲ್ಗೆ ತನ್ನ ಎಕ್ಸ್ ಬಾಯ್ಫ್ರೆಂಡ್ ಜೊತೆಗಿದ್ದ ಫೋಟೋ ಬಂದಿದೆ. ಇದರಿಂದ ಮನನೊಂದ ಯುವತಿ, ಆರತಕ್ಷತೆಗೆ ತೆರಳದೆ ನೇರವಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ವನಿತಾ ಸಹಾಯವಾಣಿಗೆ ತೆರಳಿ ದೂರು ನೀಡಿದ್ದಾಳೆ.
ತಕ್ಷಣ ಎಚ್ಚೆತ್ತುಕೊಂಡ ವನಿತಾ ಸಹಾಯವಾಣಿ ಮುಖ್ಯಸ್ಥೆ ರಾಣಿ, ಸೈಬರ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ, ಯುವಕನನ್ನು ಕರೆಸಿ ವಿಚಾರಣೆ ನಡೆಸಿ ಫೋಟೋ ಡಿಲೀಟ್ ಮಾಡಿಸಿದ್ದಾರೆ.
ಇನ್ನು ವನಿತಾ ಸಹಾಯವಾಣಿ ಮುಖ್ಯಸ್ಥೆ ಮಾತನಾಡಿ, ಯುವಕ-ಯುವತಿಯರು ಪ್ರೀತಿ-ಪ್ರೇಮ ಅಂತಾ ಮಾಡುವ ಸಂದರ್ಭದಲ್ಲಿ ಯಾವುದೇ ಖಾಸಗಿ ಫೋಟೋ ತೆಗೆದುಕೊಳ್ಳಬಾರದು. ಅಲ್ಲದೆ ಜಾಸ್ತಿ ಸಲುಗೆಯಿಂದ ಇರದೆ ಜಾಗರೂಕತೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ.