ಬೆಂಗಳೂರು: ಇವಿಎಂ (ವಿದ್ಯುನ್ಮಾನ ಮತಯಂತ್ರ)ಗಳನ್ನು ಟ್ಯಾಂಪರಿಂಗ್ ಮಾಡಲು ಸಾಧ್ಯವೇ ಇಲ್ಲ. ಆದರೆ ಇವಿಎಂಗಳು ದೋಷಪೂರಿತವಾಗಬಹುದು. ಅದು ಕೂಡಾ ನಗಣ್ಯ ಪ್ರಮಾಣದಲ್ಲಿ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ ಹೇಳಿದ್ದಾರೆ.
ಜಾಗತಿಕ ಚುನಾವಣಾ ಸಂಸ್ಥೆಗಳ ಒಕ್ಕೂಟ (ಎ-ವೆಬ್ )ದ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆದ ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗತ್ತಿನ ಹಲವು ದೇಶಗಳಲ್ಲಿ ಇವಿಎಂ ಬಳಕೆಯಲ್ಲಿದೆ. ನಮ್ಮ ದೇಶದಲ್ಲಿ ಈ ಬಗ್ಗೆ ಫಲಿತಾಂಶ ಆಧರಿಸಿ ಟೀಕೆ-ಆರೋಪಗಳು ವ್ಯಕ್ತವಾಗುತ್ತಿವೆ. 2014ರ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ಕೆಲವೇ ತಿಂಗಳಲ್ಲಿ ದಿಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್ಘಡ ಚುನಾವಣಾ ಫಲಿತಾಂಶ ಬಂದಾಗ ಯಾರೂ ಈ ಆರೋಪ ಮಾಡಿರಲಿಲ್ಲ. ಇವಿಎಂಗಳನ್ನು ಜನಸಾಮಾನ್ಯರು ಒಪ್ಪಿಕೊಂಡಿದ್ದಾರೆ. ಆದರೆ ಕೆಲ ಹಿತಾಸಕ್ತಿಯ ಗುಂಪುಗಳು ಮಾತ್ರ ಆಗಾಗ ಆರೋಪ ಮಾಡುತ್ತವೆ ಎಂದರು.
ಒಂದು ರಾಷ್ಟ್ರ, ಒಂದು ಚುನಾವಣೆ ಪದ್ಧತಿ ಜಾರಿ ಸವಾಲಿನ ಕೆಲಸವಾಗಿದ್ದು, ಕಾನೂನು ಆಯೋಗದ ಶಿಫಾರಸು ಆಧರಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅಂತಿಮವಾಗಿ ಈ ಪದ್ಧತಿ ಜಾರಿಗೊಳಿಸುವುದಕ್ಕೆ ರಾಜಕೀಯ ಪಕ್ಷಗಳ ಒಪ್ಪಿಗೆಯೂ ಮುಖ್ಯವಾಗುತ್ತದೆ. ಹಲವು ವೇದಿಕೆಗಳಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಕೇಂದ್ರ ಕಾನೂನು ಆಯೋಗ ಈ ಬಗ್ಗೆ ವರದಿ ನೀಡಬೇಕಾಗಿದ್ದು, ಅವರ ಅಭಿಪ್ರಾಯ ಆಧರಿಸಿ ನಾವು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
1969ರಿಂದಲೂ ಲೋಕಸಭೆ ಹಾಗೂ ಬೇರೆ ಬೇರೆ ರಾಜ್ಯಗಳ ವಿಧಾನಸಭೆ ಚುನಾವಣೆ ಚಕ್ರದಲ್ಲಿ ವ್ಯತ್ಯಾಸವಿದೆ. ಒಂದೊಮ್ಮೆ ಒಂದು ರಾಷ್ಟ್ರ ಒಂದೇ ಚುನಾವಣೆ ಪದ್ಧತಿ ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯನ್ನು ರಾಜಕೀಯ ಪಕ್ಷಗಳು ತೋರಿಸಿದಾಗ ಕೆಲ ರಾಜ್ಯಗಳ ವಿಧಾನಸಭೆಯನ್ನು ಕನಿಷ್ಠ ಎರಡು ವರ್ಷ ಮುಂಚಿತವಾಗಿ ವಿಸರ್ಜನೆ ಮಾಡಬೇಕಾಗುತ್ತದೆ. ಹೀಗಾಗಿ ನಿರ್ಣಯ ತೆಗೆದುಕೊಳ್ಳುವಾಗ ಪ್ರತಿಯೊಂದು ವಿಚಾರಗಳನ್ನು ಪರಿಶೀಲಿಸಬೇಕು ಎಂದು ಹೇಳಿದರು.
ಎನ್ಆರ್ಸಿ ವರದಿಯಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳ ಭಾರತೀಯ ನಾಗರಿಕತ್ವ ವಿಚಾರವನ್ನು ಟ್ರಿಬ್ಯುನಲ್ ನಿರ್ಧರಿಸುತ್ತದೆ ಎಂದು ಈಗಾಗಲೇ ಕೇಂದ್ರ ಗೃಹ ಇಲಾಖೆ ಸ್ಪಷ್ಟಪಡಿಸಿದೆ. ಅಲ್ಲಿಯವರೆಗೆ ಈ ಎಲ್ಲ ವ್ಯಕ್ತಿಗಳನ್ನು ಸೂಕ್ತ ದಾಖಲೆ ಹೊಂದಿದ್ದರೆ ಮತದಾರರು ಎಂದು ಆಯೋಗ ಪರಿಗಣಿಸುತ್ತದೆ ಎಂದು ಹೇಳಿದರು.