ಬೆಂಗಳೂರು: ಪ್ರತಿಯೊಬ್ಬರು ಪಾಶ್ಚಿಮಾತ್ಯ ದಾಸ್ಯದಿಂದ ಹೊರಬರಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಹೇಳಿದ್ದಾರೆ.
ಅಭಿನಯ ರಂಗ ಕೇಂದ್ರ ಮತ್ತು ಎಂಇಎಸ್ ರಂಗಶಾಲೆ ಸಹಯೋಗದಲ್ಲಿ 'ಕಾಲೇಜು ರಂಗದಲ್ಲಿ ನಾಟಕೋತ್ಸವ' ಹಾಗೂ 'ರಂಗ ಪರಂಪರೆ: ಪ್ರಯೋಗಶೀಲತೆ' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಮನೋವೃತ್ತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ನಮ್ಮದು ಶ್ರೇಷ್ಠ ಸಂಪ್ರದಾಯ, ನಾವು ಪಾಶ್ಚಾತ್ಯ ಕಡೆ ಮುಖಮಾಡಿದ್ದೇವೆ. ಮಾನಸಿಕ ದಾಸ್ಯಕ್ಕೆ ಒಳಗಾಗಿದ್ದೇವೆ. ಅದರಿಂದ ಹೊರಬರಬೇಕು. ನಮ್ಮದೇ ಆದ ಅಸ್ಮಿತೆ ಇದ್ದು, ಅದನ್ನು ಶೋಧಿಸಬೇಕು. ವಸಾಹತು ಶಾಯಿಯಿಂದ ಮುಕ್ತಿ ಹೊಂದ ಬೇಕು ಎಂದರು.
ಯಕ್ಷಗಾನ ಕಲಾವಿದ ಕೆ.ಮೋಹನ್ ಮಾತನಾಡಿ, ದೂತವಾಕ್ಯ ಪ್ರಸಂಗವನ್ನು ಕೋಟದ ಭಾಷೆಯಲ್ಲಿ ಮಾಡಲಾಯಿತು. ಹೀಗೆ ನಾಟಕಗಳನ್ನು ಹಲವಾರು ಪ್ರಯೋಗಗಳನ್ನು ಮಾಡಿದೆವು. ನೀರಿನ ಸಮಸ್ಯೆ ಬಗ್ಗೆ ಗೋಪಾಲಕೃಷ್ಣ ನಾಯರಿ ಅವರ ಜತೆ ಸೇರಿ ವಿವಿಧ ಪ್ರಯೋಗಗಳನ್ನು ಮಾಡಲಾಯಿತು ಎಂದರು. ಇದೇ ವೇಳೆ ದೇಸಿ ಹಾಗೂ ಪ್ರಯೋಗಶೀಲ ಪ್ರಸಿದ್ಧಿಯ ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲ ಕೃಷ್ಣ ನಾಯರಿ ಅವರಿಗೆ ಸನ್ಮಾನಿಸಲಾಯಿತು.