ಮಹದೇವಪುರ (ಬೆಂಗಳೂರು) : ಎಲ್ಲೆಡೆ ವ್ಯಾಪಕವಾಗಿ ಹರುಡುತ್ತಿರುವ ಮಹಾಮಾರಿ ಕೊರೊನಾ ಸೋಂಕು ತಡೆಯಲು ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಘೋಷಿಸಿರುವ ಲಾಕ್ಡೌನ್ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು. ಅಗತ್ಯ ವಸ್ತುಗಳನ್ನು ನಾವು ನಿಮಗೆ ತಲುಪಿಸುತ್ತೇವೆ ಎಂದು ಶಾಸಕ ಅರವಿಂದ ಲಿಂಬಾವಳಿ ಮನವಿ ಮಾಡಿದರು.
ಕ್ಷೇತ್ರದ ಗರುಡಾಚಾರ್ ಪಾಳ್ಯ ವಾರ್ಡ್ನ ಪಟ್ಟಂದೂರು ಅಗ್ರಹಾರ ಮತ್ತು ಹೂಡಿ ವಾರ್ಡ್ನ ತಿಗಳರ ಪಾಳ್ಯದಲ್ಲಿ ಕೂಲಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ದಿನಸಿ ಸಾಮಗ್ರಿ ಹಾಗೂ ತರಕಾರಿ, ಆಹಾರ ಪ್ಯಾಕೆಟ್ಗಳನ್ನ ವಿತರಿಸಿ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹೋಗಲಾಡಿಸಲು ಜನರ ಆರೋಗ್ಯ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ಘೋಷಿಸಿದ್ದಾರೆ. ಲಾಕ್ಡೌನ್ ನಿಯಮಗಳನ್ನು ಪಾಲಿಸಿದಾಗ ಮಾತ್ರ ಸೋಂಕು ತಡೆಯಲು ಸಾಧ್ಯವಾಗುತ್ತದೆ. ಅನಗತ್ಯವಾಗಿ ಗುಂಪು ಗುಂಪಾಗಿ ಓಡಾಡಬಾರದು. ಲಾಕ್ಡೌನ್ ಮುಗಿಯುವವರೆಗೂ ಮನೆಯಲ್ಲೇ ಇದ್ದು ಸಹಕರಿಸಿ ಎಂದು ಹೇಳಿದರು.
ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ನಿರ್ಗತಿಕರಿಗೆ ಲಾಕ್ಡೌನ್ ಪ್ರಾರಂಭದಿಂದಲೂ ದಿನಸಿ, ತರಕಾರಿ, ಆಹಾರ ಪ್ಯಾಕೆಟ್ಗಳ ಜೊತೆಗೆ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮಾಡಲಾಗುತ್ತದೆ. ಕ್ಷೇತ್ರದ ಎಲ್ಲ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಡವರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.