ಬೆಂಗಳೂರು : ರಾಜ್ಯ ಬಿಜೆಪಿ ಪ್ರಣಾಳಿಕೆಯನ್ನು ಕಾಂಗ್ರೆಸ್ ಪಕ್ಷ ಲೇವಡಿ ಮಾಡಿದೆ. ಟ್ವೀಟ್‌ನಲ್ಲಿ, ಬಿಜೆಪಿ ತನ್ನ ಹಿಂದಿನ ಪ್ರಣಾಳಿಕೆಯನ್ನ ಒಮ್ಮೆ ಜನರ ಮುಂದಿಟ್ಟು ಎಷ್ಟು ಭರವಸೆಗಳನ್ನು ಪೂರೈಸಿದೆ ಎಂಬ ಲೆಕ್ಕ ಕೊಡಲಿ. ನಂತರ ಹೊಸ ಪ್ರಣಾಳಿಕೆಯ ಬಗ್ಗೆ ಮಾತಾಡಲಿ. ಬಿಜೆಪಿಯ ಪ್ರಣಾಳಿಕೆ ಎಂದರೆ ಸುಳ್ಳಿನ ಕಂತೆ ಎಂಬುದು ಈಗಾಗಲೇ ಸಾಬೀತಾಗಿದೆ, ಬಿಜೆಪಿಯ ಪ್ರಣಾಳಿಕೆ ಓದುವುದು, ಸತ್ತ ಮಗನ ಜಾತಕ ಓದುವುದು ಎರಡೂ ಒಂದೇ ಎಂದು ವ್ಯಂಗ್ಯವಾಡಿದೆ.
ಕಳೆದ ಬಾರಿ ಅನ್ನಪೂರ್ಣ ಕ್ಯಾಂಟೀನ್ ತೆರೆಯುತ್ತೇವೆ ಎಂದಿದ್ದರು. ಆದರೆ ಇದ್ದ ಇಂದಿರಾ ಕ್ಯಾಂಟೀನ್ ಮುಚ್ಚಿದರು. ಈಗ ಅನ್ನಪೂರ್ಣ ಹೋಗಿ ಅಟಲ್ ಕ್ಯಾಂಟೀನ್ ತೆರೆಯುತ್ತೇವೆ ಎನ್ನುತ್ತಿದ್ದಾರೆ. ಮುಂದಿನ ಪ್ರಣಾಳಿಕೆಯಲ್ಲಿ ಮೋದಿ ಕ್ಯಾಂಟೀನ್ ತೆರೆಯುತ್ತೇವೆ ಎನ್ನುತ್ತಾರೆ. ಇದು ಹೀಗೆಯೇ ಮುಂದುವರೆಯುತ್ತದೆ ಎಂದಿದೆ.
2018ರ ಪ್ರಣಾಳಿಕೆಯಲ್ಲಿ "ಸ್ತ್ರೀ ಉನ್ನತಿ ನಿಧಿ" ಎಂಬ ಘೋಷಣೆಯ ನೆನಪಿದೆಯೇ ರಾಜ್ಯ ಬಿಜೆಪಿ? ನೆನಪಿಲ್ಲ ಎಂದರೆ ಹಿಂದಿನ ಪ್ರಣಾಳಿಕೆಯನ್ನು ತೆರೆದು ನೋಡಿ. ಬಿಜೆಪಿ ಮೊದಲು ತಮ್ಮ ಹಿಂದಿನ ಪ್ರಣಾಳಿಕೆಯ ರಿಪೋರ್ಟ್ ಕಾರ್ಡ್ ನೀಡಿ ಹೊಸ ಭರವಸೆಗಳ ಬಗ್ಗೆ ಮಾತಾಡಲಿ. ಬಿಜೆಪಿಯ ಸುಳ್ಳಿನ ಪ್ರಣಾಳಿಕೆಯನ್ನು ಗುಜರಿ ವ್ಯಾಪಾರಿಗಳೂ ಖರೀದಿಸುವುದಿಲ್ಲ.
ಯುಪಿ, ಗೋವಾಗಳಲ್ಲೂ ಬಿಜೆಪಿ 3 ಉಚಿತ ಸಿಲಿಂಡರ್ ನೀಡುವ ಭರವಸೆಯನ್ನು ನೀಡಿತ್ತು. ಆದರೆ ಅಧಿಕಾರಕ್ಕೇರಿದ ನಂತರ ಆ ರಾಜ್ಯಗಳಲ್ಲಿ ಗ್ಯಾಸ್ ಇರುವ ಸಿಲಿಂಡರ್ ಇರಲಿ, ಕನಿಷ್ಠ ಖಾಲಿ ಸಿಲಿಂಡರ್‌ಗಳನ್ನೂ ಕೊಟ್ಟಿಲ್ಲ ಬಿಜೆಪಿ. ಅದೇ ನಾಟಕವನ್ನು ಕರ್ನಾಟಕದಲ್ಲಿ ಪ್ರದರ್ಶನ ಹಮ್ಮಿಕೊಂಡಿದೆ ಅಷ್ಟೇ. ಇದೂ ಕೂಡ ಗ್ಯಾಸ್ ಸಬ್ಸಿಡಿ ಎಂಬ ಜುಮ್ಲಾದಂತೆಯೇ ಎಂದು ರಾಜ್ಯ ಕಾಂಗ್ರೆಸ್ ಹೇಳಿದೆ.
ವಸತಿ ರಹಿತರಿಗೆ 10 ಲಕ್ಷ ಮನೆ ಎನ್ನುವುದು ಬಿಜೆಪಿಯ ಮತ್ತೊಂದು ಕಿವಿ ಮೇಲೆ ಇಡಲು ತಯಾರಾದ ಪ್ಲಾಸ್ಟಿಕ್ ಹೂವು. ಹಿಂದಿನ ಪ್ರಣಾಳಿಕೆಯಲ್ಲೂ ಇದನ್ನೇ ಹೇಳಿದ್ದರು, ಈಗಲೂ ಇದನ್ನೇ ಹೇಳಿದ್ದಾರೆ. ಆದರೆ 4 ವರ್ಷದ ಅಧಿಕಾರದಲ್ಲಿ ಕೊನೆ ಪಕ್ಷ 4 ಮನೆಗಳನ್ನೂ ಮಂಜೂರು ಮಾಡಲಿಲ್ಲ. ವಸತಿ ಯೋಜನೆಗೆ ಕೇಂದ್ರದ ಅನುದಾನವನ್ನೂ ತರಲಿಲ್ಲ ಎಮದು ಟ್ವೀಟ್ ಮಾಡಿದೆ.
ಮುನಿರತ್ನ ವಿರುದ್ಧ ಆಕ್ರೋಶ: ಸಚಿವ ಮುನಿರತ್ನ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಸೋಲಿನ ಭಯದಲ್ಲಿರುವ ಬಿಜೆಪಿಯ ವಾಮ ಮಾರ್ಗಗಳು ಒಂದೆರಡಲ್ಲ. ಮುನಿರತ್ನ ನಾಯ್ಡು ಅವರೇ, ಎಂತೆಂತಹ ಚಾಲಾಕಿ ಕೆಲಸಗಳು ನಿಮ್ಮದು? ನಿಮ್ಮ ಹಿಂಬಾಲಕನನ್ನು ಮುಂದೆ ಬಿಟ್ಟು, ಪಾಕ್ ಧ್ವಜದ ಪೋಸ್ಟರ್ ಮಾಡಿಸಿ ಕಾಂಗ್ರೆಸ್ ತಲೆಗೆ ಕಟ್ಟುವ ಈ ಐಡಿಯಾ ಕೊಟ್ಟವರು ಯಾರು? ಚುನಾವಣಾ ಆಯೋಗ ಈ ಕೂಡಲೇ ಈ ಕುರಿತು ತನಿಖೆ ಕೈಗೊಂಡು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕೈ ಪಕ್ಷ, "ಮೋದಿ ಪ್ರತಿ ತಿಂಗಳು ಬರ್ತಾರಾ, ಎಲೆಕ್ಷನ್ನಿಗಾಗಿ ಬರ್ತಾರೆ ಅಷ್ಟೇ" ನರೇಂದ್ರ ಮೋದಿ ಅವರೇ, ಹಿರಿಯ ನಾಗರಿಕರೊಬ್ಬರು ಕನ್ನಡಿಗರ ಜನ್ ಕಿ ಬಾತ್ ಹೇಳಿದ್ದಾರೆ ಕೇಳಿ. ಬಿಜೆಪಿ ಆಡಳಿತದಲ್ಲಿ ಯಾವುದೇ ವರ್ಗದ ಜನರಿಗೂ ಹುಲ್ಲು ಕಡ್ಡಿಯಷ್ಟು ಅನುಕೂಲಗಳಾಗಿಲ್ಲ. ಬೂಟಾಟಿಕೆಯ ಯೋಜನೆಗಳು ಜನರಿಗೆ ತಲುಪಿಲ್ಲ. ಜನರ ಮನ್ ಕಿ ಬಾತ್ ಆಲಿಸಿ ಎಂದು ಕಾಂಗ್ರೆಸ್ ಹೇಳಿದೆ.
ಇದನ್ನೂ ಓದಿ : ಕೊಟ್ಟ ಮಾತು ಉಳಿಸಿಕೊಳ್ಳುವ ರಾಜಕಾರಣಿ ಕುಮಾರಸ್ವಾಮಿ: ಹೆಚ್ ಡಿ ದೇವೇಗೌಡ