ಬೆಂಗಳೂರು: ಶಿವಾಜಿನಗರದ ಕಂಟೇನ್ಮೆಂಟ್ ವಲಯದ ಚಾಂದಿನಿ ಚೌಕ್ನಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಸುರಕ್ಷತಾ ಕಿಟ್ ಕೊಡದಿರುವ ಬಗ್ಗೆ ಈಟಿವಿ ಭಾರತ ಬಿತ್ತರಿಸಿದ್ದ ವರದಿಗೆ ಫಲಶ್ರುತಿಯಾಗಿದೆ.
'ಪೌರಕಾರ್ಮಿಕರ ಜೀವದ ಜೊತೆ ಬಿಬಿಎಂಪಿ ಚೆಲ್ಲಾಟ: ಕಂಟೇನ್ಮೆಂಟ್ ಝೋನ್ನಲ್ಲಿ ಕನಿಷ್ಠ ಸೌಲಭ್ಯ ನೀಡದ ಆರೋಪ' ಎಂಬ ಶೀರ್ಷಿಕೆಯೊಂದಿಗೆ ವಿಸ್ತೃತ ವರದಿ ಬಿತ್ತರಿಸಲಾಗಿತ್ತು. ಇದರಿಂದ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು, ಕರ್ತವ್ಯ ಲೋಪ ಎಸಗಿದ ಹಿರಿಯ ಆರೋಗ್ಯ ಪರಿವೀಕ್ಷಕರಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ಇಂದು ಬೆಳಗ್ಗೆ ಸ್ಥಳಕ್ಕೆ ಹೋಗಿ ಐವರು ಪೌರಕಾರ್ಮಿಕರಿಗೆ ಪಿಪಿಇ ಕಿಟ್ ವಿತರಿಸಿದೆ.
ಚಾಂದಿನಿ ಚೌಕ್ ವಾರ್ಡ್ 91 ಹಾಗೂ 92 ರ ವ್ಯಾಪ್ತಿಯಲ್ಲಿ ಬರುತ್ತದೆ. ವಾರ್ಡ್ 91 ಆರೋಗ್ಯ ಅಧಿಕಾರಿಗಳು ಪೌರಕಾರ್ಮಿಕರಿಗೆ ಪಿಪಿಇ ಕಿಟ್ ನೀಡಿದ್ದರು. ಆದ್ರೆ, ವಾರ್ಡ್ 92 ನಲ್ಲಿ ಹಿರಿಯ ಅಧಿಕಾರಿಗಳು ಸೌಲಭ್ಯ ಕೊಟ್ರೂ ಕೂಡಾ ಸ್ಥಳೀಯ ಅಧಿಕಾರಿಗಳು ಬೇಜಾವಾಬ್ದಾರಿಯಿಂದ ವಿತರಿಸಿರಲಿಲ್ಲ ಎನ್ನಲಾಗ್ತಿದೆ. ಈ ಬಗ್ಗೆ ಪೌರಕಾರ್ಮಿಕರು ಅಳಲು ತೋಡಿಕೊಂಡಿದ್ದರು.
ಪೌರಕಾರ್ಮಿಕರ ಜೀವದ ಜೊತೆ ಬಿಬಿಎಂಪಿ ಚೆಲ್ಲಾಟ: ಕಂಟೇನ್ಮೆಂಟ್ ಝೋನ್ನಲ್ಲಿ ಕನಿಷ್ಠ ಸೌಲಭ್ಯ ನೀಡದ ಆರೋಪ
ಈ ಸುದ್ದಿಯನ್ನು ವರದಿ ಮಾಡಿದ 24 ಗಂಟೆಗಳಲ್ಲೇ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತರಾದ ರಂದೀಪ್ ಹಾಗೂ ಜಂಟಿ ಆಯುಕ್ತರಾದ ಪಲ್ಲವಿ ಕಿಟ್ ಹಂಚಲು ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ವರದಿ ಮಾಡಿ ಎಚ್ಚರಿಸಿದ್ದಕ್ಕೆ ಈಟಿವಿ ಭಾರತ ಗೆ ರಂದೀಪ್ ಅವರು ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಶಿವಾಜಿನಗರದ ಆರೋಗ್ಯಾಧಿಕಾರಿ ಡಾ.ಶಿವೇಗೌಡ, ಕಿಟ್ ಸಂಗ್ರಹಿಸುವಂತೆ 92ನೇ ವಾರ್ಡ್ನ ಹಿರಿಯ ಆರೋಗ್ಯ ಪರಿವೀಕ್ಷಕ ವೆಂಕಟೇಶ್ಗೆ ತಿಳಿಸಿದ್ದರೂ ಕೂಡಾ ಕರ್ತವ್ಯಲೋಪ ಎಸಗಿದ್ದಾರೆ. ಇದರಿಂದ ಪೌರಕಾರ್ಮಿಕರಿಗೆ ಕಿಟ್ ಲಭ್ಯವಾಗಿರಲಿಲ್ಲ. ಹೀಗಾಗಿ ವೆಂಕಟೇಶ್ ಗೆ ಜಂಟಿ ಆಯುಕ್ತೆ ಪಲ್ಲವಿಯವರ ಮುಖಾಂತರ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಾರೆ, ಬಡಪಾಯಿಗಳ ಸಂಕಷ್ಟಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ ಬಿತ್ತರಿಸಿದ್ದ ವರದಿ ಫಲ ನೀಡಿದೆ. ಪೌರ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿರುವ ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತೇವೆ.