ಬೆಂಗಳೂರು: ಮಾಧ್ಯಮ ಮತ್ತು ಸಂವಹನ ವಿಭಾಗದಲ್ಲಿ ಇನ್ನೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಉತ್ಕೃಷ್ಟತೆಯ ಸಂಸ್ಥೆಯನ್ನು ಸ್ಥಾಪಿಸುವುದಾಗಿ ಉಪ ಮಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಪ್ರಕಟಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗ ಇಂದು ಆಯೋಜಿಸಿದ್ದ ‘ಭಾರತೀಯ ಮಾಧ್ಯಮ ಉದ್ಯಮದ ಭವಿಷ್ಯ’ ಕುರಿತ ವೆಬಿನಾರ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾಂಪ್ರದಾಯಿಕ ಮಾಧ್ಯಮಗಳ ಜತೆಯಲ್ಲಿಯೇ ನವಮಾಧ್ಯಮಗಳು ವೇಗವಾಗಿ ಬೆಳೆಯುತ್ತಿರುವುದರಿಂದ ಮಾಧ್ಯಮ, ಸಂವಹನ ಶಿಕ್ಷಣಾರ್ಥಿಗಳಿಗೆ ಆಧುನಿಕ ಹಾಗೂ ಸಮಕಾಲೀನ ಶಿಕ್ಷಣ ನೀಡುವ ನಿಟ್ಟಿನಲ್ಲಿ ಈ ಉತ್ಕೃಷ್ಟತೆಯ ಸಂಸ್ಥೆ ಪ್ರಮುಖ ಪಾತ್ರ ವಹಿಸಲಿದೆ. ಈ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ವೇಣುಗೋಪಾಲ ಅವರು ಇತ್ತ ಗಮನಹರಿಸಬೇಕು. ಇದಕ್ಕೆ ಸರಕಾರದ ಕಡೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.
![ಡಿಸಿಎಂ ಅಶ್ವಥನಾರಾಯಣ](https://etvbharatimages.akamaized.net/etvbharat/prod-images/kn-bng-06-dcm-ashwatanarayana-statement-script-7208083_22062020210043_2206f_1592839843_659.jpg)
ತಂತ್ರಜ್ಞಾನದ ನೆರವಿನಿಂದ ಈಗಿರುವ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವುದು, ಪ್ರಸಕ್ತ ಸಂದರ್ಭಕ್ಕೆ ಬೇಕಾದ ಎಲ್ಲ ಬದಲಾವಣೆಗಳನ್ನು ಮಾಡಿಕೊಳ್ಳಲು ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ, ಅಗತ್ಯ ಸಂಪನ್ಮೂಲ ಒದಗಿಸಲಿದೆ. ಕೋವಿಡ್ 19 ನಂತರ ಡಿಜಿಟಲ್ ಮಾಧ್ಯಮಕ್ಕೆ ಹೆಚ್ಚೆಚ್ಚು ಅವಕಾಶ ಸೃಷ್ಟಿಯಾಗುತ್ತಿದೆ. ಸಾಂಪ್ರದಾಯಿಕ ಮಾಧ್ಯಮವೂ ಎದುರಾಗಿರುವ ಸವಾಲುಗಳಿಂದ ಪುಟಿದೇಳಲು ಯತ್ನಿಸುತ್ತಿದೆ. ಪ್ರಜಾಪ್ರಭುತ್ವದ 4ನೇ ಸ್ಥಂಭವಾಗಿರುವ ಮಾಧ್ಯಮದ ನೆರವಿಗೆ ಸರಕಾರವಿದೆ ಎಂದು ಅವರು ಭರವಸೆ ನೀಡಿದರು.
ಭಾರೀ ಅವಕಾಶಗಳು: ಚಿಕ್ಕಪ್ರಮಾಣದ ವೆಬ್ ತಾಣ, ನ್ಯೂಸ್ ಪೋರ್ಟಲ್ಳನ್ನು ಮಾಡುವ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡಲಾಗುವುದು. ಮುಂದಿನ ದಿನಗಳಲ್ಲಿ ಭಾರತೀಯ ಆನ್ ಲೈನ್, ಮನರಂಜನೆ ಮತ್ತು ವಿಡಿಯೋ ಮಾರುಕಟ್ಟೆ ಶರವೇಗದಲ್ಲಿ ಬೆಳೆಯಲಿದೆ. ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚು ಅವಕಾಶಗಳು ಸೃಷ್ಟಿಯಾಗುತ್ತಿವೆ. 2020ರ ಹೊತ್ತಿಗೆ ಮಾಧ್ಯಮ- ಮನರಂಜನೆ ಕ್ಷೇತ್ರದ ಗಳಿಕೆ ಸುಮಾರು 2 ಲಕ್ಷ ಕೋಟಿ ರೂ. ದಾಟುವ ನಿರೀಕ್ಷೆ ಇದೆ. 2023ರ ಹೊತ್ತಿಗೆ ವಿಡಿಯೋ ಚಂದಾದಾರರ ಸಂಖ್ಯೆಯೇ 500 ಮಿಲಿಯನ್ ದಾಟಲಿದೆ. ಇದು ಜಗತ್ತಿನಲ್ಲಿಯೇ 2ನೇ ಅತಿ ದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ ಎಂದು ಡಿಸಿಎಂ ಹೇಳಿದರು.
ಮಾಧ್ಯಮ ಕ್ಷೇತ್ರದಲ್ಲಿ ಭಾರತ ಶೈನಿಂಗ್ : ಭಾರತ ಮಾಧ್ಯಮ ಜಗತ್ತಿನಲ್ಲಿಯೇ ಅತಿ ದೊಡ್ಡ ಮಾಧ್ಯಮ ಕ್ಷೇತ್ರವಾಗಿದೆ. ಸಂವಿಧಾನದ ನಾಲ್ಕನೇ ಅಂಗ ಎಂದು ಗುರುತಿಸಿದ ಮೇಲೆ ಅದರ ಬೆಳವಣಿಗೆ ಉತ್ತಮವಾಗಿ ಆಗಿದೆ ಎನ್ನಬಹುದು. ಲಭ್ಯವಿರುವ ಮಾಹಿತಿಯಂತೆ ನಮ್ಮ ದೇಶದಲ್ಲಿ 5,000ಕ್ಕೂ ಹೆಚ್ಚು ಸುದ್ದಿಪತ್ರಿಕೆಗಳಿವೆ. 1000 ಕ್ಕೂ ಹೆಚ್ಚು ಮ್ಯಾಗಜಿನ್ ಗಳಿವೆ, 450 ಸುದ್ದಿ ವಾಹಿನಿಗಳಿವೆ, 200 ಕ್ಕೂ ಹೆಚ್ಚು ನ್ಯೂಸ್ ಪೋರ್ಟಲ್ಗಳಿವೆ. ಒಂದು ಅಂದಾಜಿನ ಪ್ರಕಾರ 72,000 ಕೋಟಿಯಷ್ಟು ವಾರ್ಷಿಕ ಜಾಹೀರಾತು ಆದಾಯವಿದೆ. ಹೀಗಾಗಿ ನಮ್ಮಲ್ಲಿ ಮಾಧ್ಯಮ ಕ್ಷೇತ್ರ ಬಲಿಷ್ಠವಾಗಿದ್ದು, ಅದು ಎದುರಿಸುತ್ತಿರುವ ಸವಾಲುಗಳಿಗೆ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಿದೆ ಎಂದು ಡಿಸಿಎಂ ಅಭಿಪ್ರಾಯಪಟ್ಟರು.