ಬೆಂಗಳೂರು: ನಾಯಿಯಿಂದ ಹರಡುವ ರೇಬಿಸ್ ಕಾಯಿಲೆ ನಿರ್ಮೂಲನೆಗೆ ರಚಿಸಿರುವ ಜಂಟಿ ಚಾಲನಾ ಸಮಿತಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳು ಹಾಗೂ ತಜ್ಞರ ಸಲಹೆ ಆಧರಿಸಿ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಬೇಕು ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಶಾಲಿನಿ ರಜನೀಶ್ ಸೂಚನೆ ನೀಡಿದರು.
ವಿಕಾಸಸೌಧದಲ್ಲಿ ಇಂದು ರೇಬಿಸ್ ನಿರ್ಮೂಲನೆಗಾಗಿ ರಚಿಸಿರುವ ಜಂಟಿ ಚಾಲನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ರೇಬಿಸ್ ನಿರ್ಮೂಲನೆಗಾಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ರಚಿಸುವ ಸಮಿತಿಗಳಲ್ಲಿನ ವಿವಿಧ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ತಮ್ಮ ಕರ್ತವ್ಯ, ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಬೇಕು.
ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೃಹತ್ ಬೆಂಗಳೂರು ಮಹಾನಗರಪಾಲಿಕೆ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್, ಅರಣ್ಯ ಇಲಾಖೆಗಳು, ವನ್ಯಜೀವಿ ಸಂರಕ್ಷಣಾ ಮಂಡಳಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಮನ್ವಯದೊಂದಿಗೆ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ತಿಳಿಸಿದರು.
ಕೃಷಿ,ತೋಟಗಾರಿಕೆ, ಪಶುಸಂಗೋಪನೆ,ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿವಿಗಳ ತಜ್ಞರು ಕೂಡ ಈ ಕ್ರಿಯಾಯೋಜನೆಯ ಭಾಗವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ಮಹಾನಗರದಲ್ಲಿರುವ ಬೀದಿನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ( Anti Rabies Vaccine) ಆಂದೋಲನ ಕೈಗೊಳ್ಳಲು ಬಿಬಿಎಂಪಿಯ ಪಶುಸಂಗೋಪನೆ ವಿಭಾಗಕ್ಕೆ ತ್ವರಿತವಾಗಿ 2 ಕೋಟಿ ರೂ ಬಿಡುಗಡೆ ಮಾಡಲು ಈ ಸಂದರ್ಭದಲ್ಲಿ ಸೂಚಿಸಿದ ಅವರು, ಸಮೀಕ್ಷಾ ಕಾರ್ಯ ಮತ್ತು ಪ್ರಕರಣಗಳ ಸರಿಯಾದ ವರದಿಯಾಗಲು ರಾಷ್ಟ್ರೀಯ ಮಾರ್ಗಸೂಚಿಗಳ ಪ್ರಕಾರ ವಿವಿಧ ಹಂತಗಳ ವೈದ್ಯಕೀಯ ,ಆರೋಗ್ಯ ಸಿಬ್ಬಂದಿಗೆ ತರಬೇತಿ ಆಯೋಜಿಸಬೇಕು ಎಂದು ತಿಳಿಸಿದರು.
ನಾಯಿಕಡಿತದ ಪ್ರಕರಣಗಳ ನಿರ್ವಹಣೆಗೆ ಅಗತ್ಯವಿರುವ ರೇಬಿಸ್ ನಿರೋಧಕ ಲಸಿಕೆ, ರೇಬಿಸ್ ಇಮ್ಯುನೊಗ್ಲಾಬ್ಯುಲಿನ್ ಎಲ್ಲ ಕಡೆ ಲಭ್ಯವಿರುವಂತೆ ನೋಡಿಕೊಳ್ಳಬೇಕು, ಘನತ್ಯಾಜ್ಯ ವಿಲೇವಾರಿ ಕುರಿತು ನಿರಂತರವಾಗಿ ಜನಜಾಗೃತಿ ಮೂಡಿಸಲು ಸಂಬಂಧಿತ ಎಲ್ಲ ಇಲಾಖೆಗಳ ನೋಡಲ್ ಅಧಿಕಾರಿಗಳು ತಮ್ಮ ಕಾರ್ಯಪ್ರವೃತ್ತರಾಗಬೇಕು. ನಿರ್ದಿಷ್ಟ ಗುರಿಗಳನ್ನು ಹಾಕಿಕೊಂಡು 2030 ರೊಳಗೆ ರೇಬಿಸ್ ನಿರ್ಮೂಲನೆಗೆ ಆಂದೋಲನದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಶಾಲಿನಿ ರಜನೀಶ್ ಹೇಳಿದರು.
ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮಾತನಾಡಿ, ಕೆಎಫ್ ರಾಜ್ಯದಲ್ಲಿ ಪ್ರಕರಣಗಳು ಹೆಚ್ಚು ವರದಿಯಾಗುವ ಜಿಲ್ಲೆಗಳ ತುಲನಾತ್ಮಕ ಅಧ್ಯಯನ ಮಾಡಿ ನಿಖರವಾದ ವೈಜ್ಞಾನಿಕ ಕಾರಣಗಳನ್ನು ಕಂಡುಕೊಳ್ಳಬೇಕು.ವಿವಿಧ ಪ್ರದೇಶಗಳ ಭೂಮಿಯ ಮಣ್ಣು ಹಾಗೂ ವಾತಾವರಣ ಕ್ಕೆ ಅನುಗುಣವಾಗಿ ನಿಯಂತ್ರಣ ಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕು ಎಂದರು.
ಸಭೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಎಂ ಕೆ ಸುದರ್ಶನ ಮಾತನಾಡಿ, ಮನೆ ಹಾಗೂ ಹಾಸ್ಟೇಲ್ ಗಳಲ್ಲಿ ಇಲಿಗಳ ಮೂತ್ರವಿಸರ್ಜನೆಯಿಂದ ವಾತಾವರಣ,ನೀರು ಕಲುಷಿತವಾಗಿ ರೋಗ ಹರಡುವ ಸಾಧ್ಯತೆಗಳಿರುತ್ತವೆ. ಪಶುವೈದ್ಯಕೀಯ ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಿಸಬೇಕು. ಶಾಲಾ ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ತಿಳಿವಳಿಕೆ ನೀಡುವುದು ಅಗತ್ಯವಾಗಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲಕುಮಾರ್, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ.ಫಾಹಿಮ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಂದೀಪ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಇದನ್ನೂಓದಿ:ರಾಜ್ಯದಲ್ಲಿ ಯಾರಿಗೂ ಝಿಕಾ ಪಾಸಿಟಿವ್ ಬಂದಿಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್